ADVERTISEMENT

ತಪ್ಪೊಪ್ಪಿಗೆಗೆ ನಾಲ್ವರು ಆರೋಪಿಗಳ ನಿರ್ಧಾರ

ಕೆಎಸ್‌ಸಿಎ ಬಾಂಬ್‌ ಸ್ಫೋಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:20 IST
Last Updated 3 ಜುಲೈ 2018, 20:20 IST
   

ಬೆಂಗಳೂರು: 2010ರಲ್ಲಿ ನಡೆದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ನಾಲ್ವರು ಉಗ್ರರು ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಲು ನಿರ್ಧರಿಸಿದ್ದಾರೆ.

ಇಲ್ಲಿನ ಎನ್‌ಎಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಮಂಗಳವಾರ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದರು. ‘ಇಂಡಿಯನ್ ಮುಜಾಯಿದ್ದೀನ್’ ಉಗ್ರ ಸಂಘಟನೆಗೆ ಸೇರಿದ 6 ಶಂಕಿತ ಉಗ್ರರನ್ನು ಪೊಲೀಸರು ಹಾಜರುಪಡಿಸಿದರು.

ಪ್ರಮುಖ ಆರೋಪಿ ಯಾಸಿನ್ ಭಟ್ಕಳ್‌ನನ್ನುತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿಚಾರಣೆಗೆ ಹಾಜರು ಪಡಿಸಲಾಯಿತು.

ADVERTISEMENT

ಶಂಕಿತ ಉಗ್ರರಾದ ಐದನೇ ಆರೋಪಿ ಗೋಹದ್ ಅಜೀಜ್ ಕೋಮನಿ, ಆರನೇ ಆರೋಪಿ ಮಹಮದ್ ತಾರೀಕ್ ಅಂಜಂ, 12ನೇ ಆರೋಪಿ ಕಮಲ್ ಹಸನ್ ಮತ್ತು 13ನೇ ಆರೋಪಿ ಮಹಮದ್ ಖಾಲಿದ್‌ ಅಖ್ತರ್ ತಪ್ಪೊಪ್ಪಿಗೆ ಹೇಳಿಕೆ ನೀಡುವುದಾಗಿ ನ್ಯಾಯಾಧೀಶರ ಮುಂದೆಅರ್ಜಿ ಸಲ್ಲಿಸಿದರು.

’ಜಿಹಾದ್ ಹೆಸರಿನಲ್ಲಿ, ಬಾಂಬ್ ಸ್ಫೋಟಕ್ಕೆ ಸಹಕಾರ ನೀಡುವಂತೆ ಪ್ರೇರೇಪಿಸಿದರು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ 6 ವರ್ಷಗಳಾಗಿದ್ದು, ಅಪರಾಧ ಕೃತ್ಯದ ಬಗ್ಗೆ ಪಶ್ಚಾತ್ತಾಪವಿದೆ. ಈ ಹಿನ್ನೆಲೆಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಲು ಒಪ್ಪಿದ್ದೇವೆ. ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬೇಕು’ ಎಂದು ಶಂಕಿತರು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ‘ಆರೋಪಿಗಳು ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ತಪ್ಪೊಪ್ಪಿಗೆ ಹೇಳಿಕೆ ಅರ್ಜಿಯನ್ನು ಮಾನ್ಯ ಮಾಡಬಾರದು’ ಎಂದು ವಾದ ಮಂಡಿಸಿದರು.

ಪಬ್ಲಿಕ್ ಪ್ರಾಸಿಕ್ಯೂಟರ್ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಶಂಕಿತರ ಅರ್ಜಿ ತಿರಸ್ಕರಿಸಿತು. ಮೌಖಿಕವಾಗಿ ಹೇಳಿಕೆ ನೀಡಿದರೆ ಸಾಲದು. ಲಿಖಿತವಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.