ADVERTISEMENT

‘ಆರ್ಥಿಕ ಅಶಿಸ್ತಿಗೆ ಅವಕಾಶ ಇಲ್ಲದ ಉಳಿತಾಯ ಬಜೆಟ್‌

ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ– ಕುಮಾರಸ್ಮಾಮಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 18:54 IST
Last Updated 5 ಜುಲೈ 2018, 18:54 IST
   

ಬೆಂಗಳೂರು: ‘ಆರ್ಥಿಕ ಅಶಿಸ್ತಿಗೆ ಅವಕಾಶ ಇಲ್ಲದ ಉಳಿತಾಯ ಬಜೆಟ್‌ ಮಂಡಿಸಿದ್ದೇನೆ. ಇದು ದಾಖಲೆ’ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ’ ಎಂದು ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ಬಜೆಟ್‌ ಮಂಡಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಲ್ಪ ಹೃದಯ ವೈಶಾಲ್ಯತೆ ತೋರಿಸಿ. ಕಲ್ಮಶ ಮನಸ್ಸಿಗೆ ಎಲ್ಲವೂ ಅಸತ್ಯವಾಗಿ ಕಾಣುತ್ತದೆ’ ಎಂದು ಬಿಜೆ‍ಪಿ ನಾಯಕರಿಗೆ ಮಾತುಗಳಿಂದ ಚುಚ್ಚಿದರು.

‘ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇದೇ ಫೆ. 16ರಂದು ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲ ಕಾರ್ಯಕ್ರಮಗಳು ಮುಂದುವರಿಯಲಿವೆ. ಆ ಬಜೆಟ್‌ಗೆ ಹೋಲಿಸಿದರೆ ನನ್ನ ಬಜೆಟ್‌ ₹ 9,307 ಕೋಟಿ ಗಾತ್ರದಲ್ಲಿ ದೊಡ್ಡದಿದೆ. ಆದರೆ, ವಿತ್ತೀಯ ಹೊಣೆಗಾರಿಕೆ ಶಾಸನಬದ್ಧವಾಗಿದೆ’ ಎಂದು ಹೇಳಿದರು.

ADVERTISEMENT

‘ಇದು ಹಾಸನ ಬಜೆಟ್‌, ಬೆಂಗಳೂರು ನಗರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಅಶೋಕ ಚಕ್ರವರ್ತಿ ಟೀಕಿಸಿದ್ದಾರೆ. ಅವರ ಆಡಳಿತ ಅವಧಿಯಲ್ಲಿ ಏನು ಕೊಟ್ಟಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಲಿ. ಬೆಂಗಳೂರಿನ ಸಾರಿಗೆ ಸಂಪರ್ಕ ಸುಧಾರಣೆಗೆ ಒಂದಕ್ಕೊಂದು ಸಂಪರ್ಕ ಹೊಂದಿರುವ ಆರು ಎಲಿವೇಟೆಡ್‌ ಕಾರಿಡಾರ್‌ಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ₹ 15,825 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಬದ್ಧನಾಗಿದ್ದೇನೆ’ ಎಂದು ಬಿಜೆಪಿ ಶಾಸಕ ಆರ್‌. ಅಶೋಕ ಅವರ ಟೀಕೆಗೆ ಉತ್ತರ ನೀಡಿದರು.

‘ರೈತರ ಸಾಲ ಮನ್ನಾಕ್ಕೆ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೋರಿದ್ದೆ. ಆದರೆ, ಬಿಡಿಗಾಸು ಕೊಡುವ ಯೋಗ್ಯತೆ ಕೇಂದ್ರ ಸರ್ಕಾರಕ್ಕೆ ಇಲ್ಲ. ನಾನು ರಿಸ್ಕ್‌ ತೆಗೆದುಕೊಂಡು ಸಾಲ ಮನ್ನಾ ಮಾಡಿದ್ದೇನೆ. ಈ ಯೋಜನೆಯ ವ್ಯಾಪ್ತಿಯಲ್ಲಿ ಬರುವ ರೈತರಿಗೆ ತಕ್ಷಣವೇ ಋಣಮುಕ್ತ ಪತ್ರ ನೀಡುತ್ತೇನೆ’ ಎಂದು ವಿವರಿಸಿದರು.

‘ಸಿದ್ದರಾಮಯ್ಯ ಸರ್ಕಾರದ ಅವಧಿಯ ಸಾಲ ಮನ್ನಾದಲ್ಲಿ ₹ 4,150 ಕೋಟಿ ಈ ವರ್ಷ ಭರಿಸಬೇಕಿದೆ. ಅಲ್ಲದೆ, ಈ ವರ್ಷದ ₹ 6,500 ಕೋಟಿ ಸಾಲ ಮನ್ನಾ ಮಾಡಬೇಕು. ಎರಡೂ ಸೇರಿ ₹ 10,650 ಕೋಟಿ ಮೊತ್ತವನ್ನು ಮೊದಲ ವರ್ಷ ಸರ್ಕಾರ ಭರಿಸಲಿದೆ’ ಎಂದರು.

‌‘ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ₹ 10 ಕೋಟಿ ನೀಡಿದ್ದೇನೆ. ಆದರೆ, ಅದನ್ನು ಅದನ್ನು ಬಜೆಟ್‌ನಲ್ಲಿ ಘೋಷಿಸಿಲ್ಲ’ ಎಂದೂ ಅವರು ತಿಳಿಸಿದರು.

‘ಯಾವುದೇ ಜಿಲ್ಲೆಯನ್ನು ಮರೆತಿಲ್ಲ. ಕಲಬುರ್ಗಿ, ಕೊಪ್ಪಳ, ಬೆಳಗಾವಿ, ಕರಾವಳಿ ಹೇಗೆ ಎಲ್ಲಕ್ಕೂ ಆದ್ಯತೆ ನೀಡಿದ್ದೇನೆ. ಹಾಸನಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಬಿಜೆಪಿಯವರು ಟೀಕಿಸಿದ್ದಾರೆ. ಹಾಸನದಲ್ಲಿರುವುದು ಬಿಜೆಪಿ ಶಾಸಕ. ಜೆಡಿಎಸ್‌ನವರಲ್ಲ‌. ಅವರು ಬೇಡ ಅಂದರೆ ವಾಪಸು ಪಡೆದುಕೊಳ್ಳುತ್ತೇನೆ’ ಎಂದರು.

‘ಬಜೆಟ್‌ನಲ್ಲಿ ತೆರಿಗೆ ಹಚ್ಚಿದ ಬಳಿಕವೂ ರಾಜ್ಯದಲ್ಲಿ ಪೆಟ್ರೋಲ್, ಡಿಸೆಲ್‌ ದರ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯೇ ಇರಲಿ‌ದೆ’ ಎಂದೂ ಸ್ಪಷ್ಟನೆ ನೀಡಿದರು.

‘ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ್ದ ಸಾಲಮನ್ನಾದಲ್ಲಿ ₹ 800 ಕೋಟಿ ಮಾತ್ರ ಅವರ ಅವಧಿಯಲ್ಲಿ ಬಿಜೆಪಿ ಸರ್ಕಾರ ಭರಿಸಿತ್ತು. ಬಾಕಿ ಮೊತ್ತವನ್ನು ಸಿದ್ದರಾಮಯ್ಯ ಸರ್ಕಾರ ಭರಿಸಿದೆ. ಶೆಟ್ಟರ್‌ ಹುಬ್ಬಳ್ಳಿಯಿಂದ ಹಣ ತರುತ್ತರಾ’ ಎಂದು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.

‘ಬೇರೆ ಯಾವ ಕಾರ್ಯಕ್ರಮ ಬೇಕು ಹೇಳಿ ಎಲ್ಲವನ್ನೂ ಕೊಡುತ್ತೇನೆ. ಯಾವ ವಲಯವನ್ನು ಕೈಬಿಟ್ಡಿದ್ದೇನೆ ಹೇಳಿ’ ಎಂದೂ ಸವಾಲೆಸೆದರು.

**

ಗಣಿಗಾರಿಕೆ ಕೋರ್ಸ್‌ ಆರಂಭ

ರಾಜ್ಯದ ಎಲ್ಲ ಕಲ್ಲುಗಣಿ ಗುತ್ತಿಗೆದಾರರಿಗೂ ಸುರಕ್ಷತೆ ಬಗ್ಗೆ ತರಬೇತಿ ನೀಡಲು ವಿಶೇಷ ಕೋರ್ಸ್ ಆರಂಭಿಸಲಾಗುವುದು.

ಗಣಿ ಸುರಕ್ಷಿತ ವಿಧಾನಗಳು, ಸ್ಫೋಟಕ ಬಳಕೆ, ಪರಿಸರ ಸಂರಕ್ಷಣೆ... ಸೇರಿದಂತೆ, ಇತ್ಯಾದಿ ವಿಷಯಗಳ ಬಗ್ಗೆ ಅಲ್ಪಾವಧಿ ತರಬೇತಿ ನೀಡಲು ಕೋರ್ಸ್ ಆರಂಭಿಸಿ ಪ್ರಮಾಣಪತ್ರ ನೀಡಲು ಉದ್ದೇಶಿಸಲಾಗಿದೆ.

ಹಾಲಿ ಗುತ್ತಿಗೆದಾರರು ಹಾಗೂ ಹೊಸದಾಗಿ ಪರವಾನಗಿ ಪಡೆಯುವ ಗುತ್ತಿಗೆದಾರರು ಈ ತರಬೇತಿ ಪಡೆಯುವುದು ಕಡ್ಡಾಯ.

**

‘ಬಜೆಟ್‌ನಲ್ಲಿ ಏನೂ ಇಲ್ಲ ಎಂದು ಯಾರೂ ಅಂದುಕೊಳ್ಳುವುದು ಬೇಡ. ಚರ್ಚೆಗೆ ಬನ್ನಿ. ಎಲ್ಲದಕ್ಕೂ ಉತ್ತರ ನೀಡುತ್ತೇನೆ;

–ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

**

ಉಭಯ ಪಕ್ಷಗಳ ತೀರ್ಮಾನದಂತೆ ಈ ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟರಿಗೆ ರೂಪಿಸಿದ ಯೋಜನೆಗಳು ಮುಂದುವರಿಯಲಿದೆ

ಸಿದ್ದರಾಮಯ್ಯ

–ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

**

* ರೈತರ ಸಾಲ ಗೊಂದಲದ ಗೂಡಾಗಿದೆ. ಜನರಿಗೆ ಹೊರೆ ಹಾಕುವುದಿಲ್ಲ ಎಂದು ತೆರಿಗೆಗಳನ್ನು ಹೆಚ್ಚಿಸಿದ್ದಾರೆ. ರೈತರಿಗೆ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡಿದ್ದಾರೆ. ಹೊಣೆಗಾರಿಕೆ ಇಲ್ಲದ ಬಜೆಟ್‌.

–ಬಸವರಾಜ ಬೊಮ್ಮಾಯಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.