ADVERTISEMENT

ಕುವೆಂಪು ಮೂಲ ಜೈನ, ಭೈರಪ್ಪ ವೈದಿಕ ಬ್ರಾಹ್ಮಣರಲ್ಲ

ಬಂಜಗೆರೆ ಜಯಪ್ರಕಾಶ್‌ ಪ್ರತಿಪಾದಿನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 16:52 IST
Last Updated 23 ಆಗಸ್ಟ್ 2018, 16:52 IST
ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್‌
ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್‌    

ದಾವಣಗೆರೆ: ಕುವೆಂಪು ಅವರ ಪೂರ್ವಿಕರು ಜೈನ ಸಮುದಾಯದವರಾಗಿದ್ದರು. ಎಸ್‌.ಎಲ್‌. ಭೈರಪ್ಪ ಅವರು ವೈದಿಕ ಬ್ರಾಹ್ಮಣರಲ್ಲ ಎಂದು ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್‌ ಪ್ರತಿಪಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಪರಂಪರೆಯ ಜಾತ್ಯತೀತ ನೆಲೆಗಳು’ ಬಗೆಗಿನ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಉತ್ತರ ಭಾರತದಲ್ಲಿನ ವಾಣಿಜ್ಯ ವಿನಿಮಯ ಧರ್ಮಗಳು ಕರ್ನಾಟಕಕ್ಕೆ ಬಂದಾಗ ಕೃಷಿ ಕೇಂದ್ರಿತ ಧರ್ಮಗಳಾಗಿ ಬದಲಾಗಿದ್ದವು. ಜೈನ ಧರ್ಮ ಕೂಡ ಕರ್ನಾಟಕಕ್ಕೆ ಬಂದ ಬಳಿಕ ವ್ಯವಸಾಯ ಧರ್ಮವಾಯಿತು. ಆದರೆ, ಅದಕ್ಕಿಂತ ಮೊದಲೇ ಇಲ್ಲಿ ಕೃಷಿಕರ ಜತೆಗೆ ದೇಸಿ ವ್ಯವಹಾರ ನಡೆಸುತ್ತಿದ್ದವರು ಜೈನರಾಗುವುದಿಲ್ಲ. ಅವರು ಲಿಂಗಾಯತರಾಗುತ್ತಾರೆ. ಲೇವಾದೇವಿ ವ್ಯವಹಾರ ಬೇರೆ; ದೇಸಿ ವ್ಯವಹಾರ ಬೇರೆ. ಲೇವಾದೇವಿ ಧರ್ಮಗಳು ಇಲ್ಲಿ ಕೃಷಿಕ ಧರ್ಮಗಳಾಗಿ ಮಾರ್ಪಾಟು ಆದವು. ಹಾಗಾಗಿ ಕುವೆಂಪು ಅವರ ಪೂರ್ವಿಕರು ಜೈನರಾಗಿದ್ದರು ಎಂದು ಪ್ರತಿಪಾದಿಸಿದರು.

ADVERTISEMENT

ವೈದಿಕ ಬ್ರಾಹ್ಮಣರ ಪ್ರಭಾವ ಮತ್ತು ಸಂಖ್ಯೆ ಎರಡೂ ದಕ್ಷಿಣ ಭಾರತದಲ್ಲಿ ಕಡಿಮೆ. ಪಂಪನನ್ನು ಬ್ರಾಹ್ಮಣ ಎಂದು ಗುರುತಿಸಿದ್ದರೂ ಆತ ವೈದಿಕ ಬ್ರಾಹ್ಮಣನಲ್ಲ; ಲೌಕಿಕ ಬ್ರಾಹ್ಮಣ. ಕೃಷಿ ಮಾಡಿಕೊಂಡು ಬಂದ ಬ್ರಾಹ್ಮಣ. ಹಿಂದುತ್ವದ ಉಗ್ರ ಪ್ರತಿಪಾದಕರಾಗಿರುವ ಭೈರಪ್ಪ ಕೂಡ ವೈದಿಕರಲ್ಲ; ಅವರು ಹೊಯ್ಸಳ ಕರ್ನಾಟಕದ ಬ್ರಾಹ್ಮಣರು. ಶಾನುಭೋಗರಾಗಿ, ರೈತರಾಗಿ ಕೆಲಸ ಮಾಡುವವರು. ಇತರ ಬ್ರಾಹ್ಮಣರು ಇವರನ್ನು ಶ್ರೇಷ್ಠರೆಂದು ಎಂದೂ ಪರಿಗಣಿಸಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.