ADVERTISEMENT

ವಿಕೋಪಕ್ಕೆ ಬಲಿಯಾದವರಿಗೂ, ಆತ್ಮಹತ್ಯೆ ಮಾಡಿಕೊಂಡವರಷ್ಟೇ ಪರಿಹಾರ: ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 8:12 IST
Last Updated 23 ಆಗಸ್ಟ್ 2018, 8:12 IST
ಆರ್‌.ವಿ.ದೇಶಪಾಂಡೆ
ಆರ್‌.ವಿ.ದೇಶಪಾಂಡೆ   

ಬಾಗಲಕೋಟೆ: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರ್ಕಾರದಿಂದ ನೀಡುವ ಎಲ್ಲ ಸವಲತ್ತುಗಳನ್ನು ಪ್ರಕೃತಿ ವಿಕೋಪದಲ್ಲಿ ಬಲಿಯಾದ ಕುಟುಂಬದವರಿಗೂ ಕೊಡಲು ಪ್ರಸ್ತಾವ ಸಲ್ಲಿಸುವಂತೆ ಇಲ್ಲಿನ ಜಿಲ್ಲಾಡಳಿತಕ್ಕೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಮಳೆ ಕೊರತೆ ಇರುವ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಅವರು, ನಂತರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಜೂನ್ ತಿಂಗಳ ಆರಂಭದಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಮೂವರು ಸಾವಿಗೀಡಾಗಿದ್ದಾರೆ ಎಂಬುದನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸಭೆಯ ಗಮನಕ್ಕೆ ತಂದರು.ಈ ವೇಳೆ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಕುಟುಂಬಗಳಿಗೆ ಸವಲತ್ತು ಕಲ್ಪಿಸುವ ವಿಚಾರ ಚರ್ಚೆಗೆ ಬಂದಿತು.

ADVERTISEMENT

ಈಗಿರುವ ನಿಯಮಾವಳಿಯಂತೆ ಕೇವಲ ಪರಿಹಾರ ಮೊತ್ತ ನೀಡಲು ಅವಕಾಶವಿದೆ. ಆದರೆ ಪ್ರಕೃತಿ ಅವಘಡದಲ್ಲಿ ಸಾವಿಗೀಡಾದವರಲ್ಲಿ ಬಹುತೇಕರು ಕುಟುಂಬಗಳಿಗೆ ಆಸರೆಯಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಅವಲಂಬಿತರಿಗೆ ಹೆಚ್ಚಿನ ನೆರವಿನ ಅಗತ್ಯವಿರುತ್ತದೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಮೊತ್ತದ ಜೊತೆ ವಿಧವಾ ಪತ್ನಿಗೆ ಮಾಸಾಶನ, ಮಕ್ಕಳಿಗೆ ಉಚಿತ ಶಿಕ್ಷಣ, ಬಿಪಿಎಲ್ ಕಾರ್ಡ್, ಹಾಸ್ಟೆಲ್ ಸೌಲಭ್ಯ ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ಪ್ರಕೃತಿ ವಿಕೋಪ ಸಂತ್ರಸ್ತರಿಗೂ ವಿಸ್ತರಿಸಬಹುದು ಎಂಬುದರ ಬಗ್ಗೆ ಅಧಿಕಾರಿಗಳು ಸಚಿವರ ಗಮನ ಸೆಳೆದರು.

ಅದಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ಕೂಡಲೇ ಆ ಬಗ್ಗೆ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.