ADVERTISEMENT

ಅಣೆಕಟ್ಟೆ: ಚೀನಾ ಸಮರ್ಥನೆ

ಬ್ರಹ್ಮಪುತ್ರ ನದಿಯಲ್ಲಿ ಜಲವಿದ್ಯುತ್ ಉತ್ಪಾದನೆ ಆರಂಭ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST
ಟಿಬೆಟ್‌ನ ಗ್ಯಾಕಾದಲ್ಲಿ ಜಂಗ್ಮು ಜಲವಿದ್ಯುತ್ ಯೋಜನೆಗಾಗಿ ಬ್ರಹ್ಮಪುತ್ರ ನದಿಗೆ ಚೀನಾ ನಿರ್ಮಿಸಿರುವ ಅಣೆಕಟ್ಟೆ 	– ಎಎಫ್‌ಪಿ ಚಿತ್ರ
ಟಿಬೆಟ್‌ನ ಗ್ಯಾಕಾದಲ್ಲಿ ಜಂಗ್ಮು ಜಲವಿದ್ಯುತ್ ಯೋಜನೆಗಾಗಿ ಬ್ರಹ್ಮಪುತ್ರ ನದಿಗೆ ಚೀನಾ ನಿರ್ಮಿಸಿರುವ ಅಣೆಕಟ್ಟೆ – ಎಎಫ್‌ಪಿ ಚಿತ್ರ   

ಬೀಜಿಂಗ್‌ (ಪಿಟಿಐ): ಟಿಬೆಟ್‌ನಲ್ಲಿ ಜಲವಿದ್ಯುತ್‌  ಯೋಜನೆಗಾಗಿ ಬ್ರಹ್ಮ­ಪುತ್ರ ನದಿಗೆ ಅಣೆಕಟ್ಟೆ ನಿರ್ಮಿಸುವ ಸರಣಿ ಯೋಜನೆಯನ್ನು ಸಮರ್ಥಿಸಿ­ಕೊಂಡಿ­ರುವ ಚೀನಾ, ಅಣೆಕಟ್ಟೆ ನಿರ್ಮಾಣದ ವೇಳೆ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಕಾಯ್ದು­ಕೊಳ್ಳುವುದಾಗಿ ಹೇಳಿದೆ.

ಅಣೆಕಟ್ಟಿನ ಕೆಳಭಾಗದಲ್ಲಿರುವ ಭಾರತ ಮತ್ತು ಬಾಂಗ್ಲಾದೇಶಗಳ ಸುರಕ್ಷತೆ ಕುರಿತೂ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವುದಾಗಿ ಅದು ತಿಳಿಸಿದೆ.

‘ಗಡಿಯಾಚೆಗಿನ ನದಿ ನೀರಿನ ಬಳಕೆಯ ಯೋಜನೆಯಲ್ಲಿ ಚೀನಾ ಜವಾಬ್ದಾರಿಯುತ ಗುಣವನ್ನು ಅಳವ­ಡಿಸಿ­ಕೊಂಡಿದೆ. ಇದು ಪರಸ್ಪರ ಕೈಜೋಡಿ­ಸು­ವುದರೊಂದಿಗೆ ಮತ್ತು ಸುರಕ್ಷತೆ­ಯೊಂದಿಗೆ ಸಾಗಲಿದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹು ಚುನಿಂಗ್‌ ಸೋಮವಾರ ತಿಳಿಸಿದರು.

‘ಜಲವಿದ್ಯುತ್‌ ಯೋಜನೆಗಳು ಹರಿವಿನ ಭಾಗದಲ್ಲಿರುವ ಪ್ರದೇಶಗಳ ಪರಿಸರ ವ್ಯವಸ್ಥೆ ಮತ್ತು ಪ್ರವಾಹ ನಿಯಂತ್ರಣಗಳಿಗೆ ಯಾವುದೇ ತೊಡಕು ಉಂಟುಮಾಡುವುದಿಲ್ಲ. ಅವರೊಂದಿಗೆ ಸಮೀಪದ ಸಂಪರ್ಕ ಮತ್ತು ಸಹಕಾರ ಹೊಂದಿದ್ದೇವೆ’ ಎಂದರು.

‘ಅಣೆಕಟ್ಟೆ ಕುರಿತ ಮಾಹಿತಿಯನ್ನು ಒದಗಿಸಿರುವುದಕ್ಕಾಗಿ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಗೆ ನೆರವು ನೀಡುವ ಚೀನಾದ ಭರವಸೆಗೆ ಭಾರತ ಕೃತಜ್ಞತೆ ಸಲ್ಲಿಸಿದೆ’ ಎಂದು  ಹೇಳಿದರು.

2013ರಲ್ಲಿ ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರೊಂದಿಗೆ ಮಾಡಿ­ಕೊಂಡ ಗಡಿಯಾಚೆಗಿನ ನದಿ ನೀರಿನ ಕುರಿತ ಒಪ್ಪಂದವನ್ನು ಪ್ರಸ್ತಾಪಿ­ಸಿದ ಚುನಿಂಗ್, ಈ ಒಪ್ಪಂದವನ್ನು ಭಾರತ­ದೊಂದಿಗಿನ ಸಹಕಾರವನ್ನು ವೃದ್ಧಿಸಿ­ಕೊಳ್ಳಲು ಬಳಸುವುದಾಗಿ ತಿಳಿಸಿದರು.

ವಿದ್ಯುತ್‌ ಉತ್ಪಾದನೆ ಪ್ರಾರಂಭ: ಬ್ರಹ್ಮಪುತ್ರ ನದಿಯ ಜಲವಿದ್ಯುತ್‌ ಯೋಜನೆಯಲ್ಲಿ ಮೊದಲ ಹಂತದ ವಿದ್ಯುತ್‌ ಉತ್ಪಾದನೆಯನ್ನು ಚೀನಾ ಪ್ರಾರಂಭಿಸಿದೆ. ಜಂಗ್ಮು ಜಲವಿದ್ಯುತ್‌ ಸ್ಥಾವರದಲ್ಲಿ ₨160 ಕೋಟಿ ವೆಚ್ಚದ ಸುಮಾರು 5 ಲಕ್ಷ ಕಿಲೊವಾಟ್‌ ಉತ್ಪಾದನಾ ಸಾಮರ್ಥ್ಯದ ಈ ಘಟಕ ಭಾನುವಾರ ಕಾರ್ಯಾರಂಭ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.