ADVERTISEMENT

ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ತೊಲಗಲಿ

ಟ್ರಂಪ್‌ ಹೇಳಿಕೆಗೆ ತಾಲಿಬಾನ್‌ ಎಚ್ಚರಿಕೆ

ಏಜೆನ್ಸೀಸ್
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ತೊಲಗಲಿ
ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ತೊಲಗಲಿ   

ಕಾಬೂಲ್‌ (ಎಎಫ್‌ಪಿ): ಅಫ್ಗಾನಿಸ್ತಾನದಲ್ಲಿರುವ ಸೇನೆಯನ್ನು ಅಮೆರಿಕ ವಾಪಸ್‌ ಕರೆಸಿಕೊಳ್ಳಬೇಕು ಎಂದು ತಾಲಿಬಾನ್‌ ಎಚ್ಚರಿಕೆ ನೀಡಿದೆ. ಒಂದು ವೇಳೆ ಈ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಅಮೆರಿಕದ ಪಾಲಿಗೆ ಅಫ್ಗಾನಿಸ್ತಾನ ಸ್ಮಶಾನವಾಗಲಿದೆ ಎಂದು ಕಠಿಣ ಸಂದೇಶ ನೀಡಿದೆ.

‘ನಮ್ಮ ನೆಲದಲ್ಲಿ ಅಮೆರಿಕದ ಒಬ್ಬ ಸೈನಿಕ ಇರುವವರೆಗೂ ಮತ್ತು ನಮ್ಮ ಮೇಲೆ ಯುದ್ಧ ಹೇರುವುದನ್ನು ನಿಲ್ಲಿಸುವವರೆಗೂ ಜಿಹಾದ್‌ ಅನ್ನು ಇನ್ನೂ ಹೆಚ್ಚು ಉತ್ಸಾಹದಿಂದ ಮುಂದುವರಿಸುತ್ತೇವೆ’ ಎಂದು ತಾಲಿಬಾನ್‌ ವಕ್ತಾರ ಝಬಿವುಲ್ಲಾಹ್‌ ಮುಜಾಹಿದ್‌ ತಿಳಿಸಿದ್ದಾರೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆಕ್ರಮಣಕಾರಿ ನಡವಳಿಕೆಯನ್ನು ಮುಂದುವರಿಸಿದ್ದಾರೆ. ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲ್ಯೂ ಬುಷ್‌ ಸಹ ಇದೇ ರೀತಿ ವರ್ತಿಸಿದ್ದರು. ಅಮೆರಿಕದ ಸೈನಿಕರ ಶಕ್ತಿ ಮತ್ತು ಸಾಮರ್ಥ್ಯ ಇಲ್ಲಿ ವ್ಯರ್ಥವಾಗುತ್ತಿದೆ. ನಮ್ಮ ದೇಶವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದು ನಮಗೆ ಗೊತ್ತಿದೆ. ಯಾವುದನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ತಾಲಿಬಾನ್‌ನ ಹಿರಿಯ ಕಮಾಂಡರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಹಲವಾರು ವರ್ಷಗಳಿಂದ ನಾವು ಹೋರಾಟ ನಡೆಸುತ್ತಿದ್ದೇವೆ. ನಾವು ಭಯಪಟ್ಟುಕೊಂಡಿಲ್ಲ. ನಮ್ಮ ಕೊನೆ ಉಸಿರು ಇರುವವರೆಗೂ ಯುದ್ಧವನ್ನು ಎದುರಿಸುತ್ತೇವೆ. ಪ್ರಸ್ತುತ ಅಫ್ಗನ್‌ ಸರ್ಕಾರ ಅಮೆರಿಕದ ಕೈಗೊಂಬೆಯಾಗಿದೆ ಎನ್ನುವುದು ಟ್ರಂಪ್‌ ಅವರು ನೀಡಿಕೆ ಹೇಳಿಕೆಯಿಂದ ಸಾಬೀತಾಗಿದೆ’ ಎಂದು ಅವರು ಹೇಳಿದ್ದಾರೆ.

ಅಫ್ಗಾನಿಸ್ತಾನದಿಂದ ಆತುರದಲ್ಲಿ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವುದಿಲ್ಲ. ಬದಲಾಗಿ ಇನ್ನೂ ಸಾವಿರಾರು ಸೈನಿಕರನ್ನು ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೇಳಿಕೆ ನೀಡಿದ ಬಳಿಕ ತಾಲಿಬಾನ್‌ ಈ ಪ್ರತಿಕ್ರಿಯೆ ನೀಡಿದೆ.

ಅಫ್ಗಾನಿಸ್ತಾನದಲ್ಲಿನ ಸುದೀರ್ಘ ಯುದ್ಧವನ್ನು ಶೀಘ್ರದಲ್ಲಿ ಅಂತ್ಯಗೊಳಿಸುವುದಾಗಿ ಡೊನಾಲ್ಡ್‌ ಟ್ರಂಪ್‌ ಅವರು ಈ ಮೊದಲು ಹೇಳಿಕೆ ನೀಡಿದ್ದರು. ಆದರೆ, ಸೋಮವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌ ಅವರು, ಈ ಬಗ್ಗೆ  ತದ್ವಿರುದ್ವ ಹೇಳಿಕೆ ನೀಡಿದರು. ಅಫ್ಗಾನಿಸ್ತಾನದಿಂದ ನಿರ್ಗಮಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಆದರೆ, ನಿಯೋಜಿಸಲಾಗುವ ಸೇನಾ ತುಕಡಿಗಳ ವಿವರ ನೀಡಲಿಲ್ಲ.

ಅಫ್ಗಾನಿಸ್ತಾನಕ್ಕೆ 3,900 ಸೈನಿಕರನ್ನು ನಿಯೋಜಿಸಲು ರಕ್ಷಣಾ ಸಚಿವರಿಗೆ ಟ್ರಂಪ್‌ ಸೂಚಿಸಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಗಳು ತಿಳಿಸಿದ್ದಾರೆ.

* ಯುದ್ಧವನ್ನು ಮುಂದುವರಿಸುವ ಬದಲಾಗಿ ಅಫ್ಗಾನಿಸ್ತಾನದಿಂದ ಹೇಗೆ ಸೇನೆಯನ್ನು ವಾಪಸ್‌ ಕರೆಸಿಕೊಳ್ಳಬೇಕು ಎನ್ನುವ ಬಗ್ಗೆ ಅಮೆರಿಕ ಚಿಂತನೆ ನಡೆಸಬೇಕು

- ಝಬಿವುಲ್ಲಾಹ್‌ ಮುಜಾಹಿದ್‌, ತಾಲಿಬಾನ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.