ADVERTISEMENT

ಅಮೆರಿಕದ ಕಾಲೇಜುಗಳಲ್ಲಿ ಜನಾಂಗೀಯ ತಾರತಮ್ಯ

ಭಾರತ ಸೇರಿದಂತೆ ಏಷ್ಯಾ ಮೂಲದ ವಿದ್ಯಾರ್ಥಿಗಳಿಂದ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST

ನ್ಯೂಯಾರ್ಕ್‌ (ಪಿಟಿಐ): ಪ್ರತಿಷ್ಠಿತ ಯೇಲ್‌ ವಿಶ್ವವಿದ್ಯಾಲಯ ಹಾಗೂ  ಇತರ ಎರಡು ಐವಿ ಲೀಗ್‌ ಇನ್ಸ್‌ಸ್ಟಿಟ್ಯೂಷನ್‌ಗಳಲ್ಲಿ ಪ್ರವೇಶಾತಿ ಸಂದರ್ಭದಲ್ಲಿ ತಮ್ಮ ವಿರುದ್ಧ ಜನಾಂಗೀಯ ನೆಲೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಭಾರತೀಯರನ್ನು ಒಳಗೊಂಡ ಅಮೆರಿಕ ನಿವಾಸಿಗಳ ಸಂಘಟನೆಗಳು ಆರೋಪಿಸಿವೆ.

ಅಮೆರಿಕನ್‌ ಸೊಸೈಟಿ ಆಫ್‌ ಎಂಜಿನಿಯರ್ಸ್‌ನ ರಾಷ್ಟ್ರೀಯ ಘಟಕ ಮತ್ತು ಲಾಸ್‌ ಏಂಜಲೀಸ್‌ನ ಗ್ಲೋಬಲ್‌ ಆರ್ಗನೈಸೇಷನ್‌ ಘಟಕವೂ ಸೇರಿದಂತೆ ಏಷ್ಯಾ ಮೂಲದ ಅಮೆರಿಕನ್ನರ 130ಕ್ಕೂ ಅಧಿಕ ಸಂಘಟನೆಗಳನ್ನು ಒಳಗೊಂಡ ಮೈತ್ರಿ ಕೂಟವು ಏಷ್ಯನ್‌ ಅಮೆರಿಕನ್ ಕೊಯಲಿಷನ್‌ ಫಾರ್‌ ಎಜುಕೇಶನ್‌ (ಎಎಸಿಇ) ಮೂಲಕ ಸೋಮವಾರ ಈ ಸಂಬಂಧ ದೂರು ಸಲ್ಲಿಸಿವೆ.

ಅಮೆರಿಕದ ಶಿಕ್ಷಣ ಮತ್ತು ನ್ಯಾಯ ಇಲಾಖೆಗೆ ಸಲ್ಲಿಸಿರುವ ದೂರಿನಲ್ಲಿ ಯೇಲ್‌, ಬ್ರೌನ್‌ ವಿಶ್ವವಿದ್ಯಾಲಯ ಮತ್ತು ಡಾರ್ಟ್‌ಮೌತ್‌ ಕಾಲೇಜಿನ ವಿರುದ್ಧ ಜನಾಂಗೀಯ ತಾರತಮ್ಯದ ಆರೋಪ ಮಾಡಲಾಗಿದೆ.

ರಹಸ್ಯ ಕೋಟಾ ಯೋಜನೆ: ‘ಈ ಮೂರು ಶಿಕ್ಷಣ ಸಂಸ್ಥೆಗಳು ಏಷ್ಯಾ ಮೂಲದ ಅಮೆರಿನ್ನರ ವಿರುದ್ಧ  ಜನಾಂಗೀಯ ತಾರತಮ್ಯ ನೀತಿ ಅನುಸರಿಸುತ್ತಿವೆ, ಕಾಲೇಜು ಪ್ರವೇಶಾತಿಯಲ್ಲಿ ಜನಾಂಗೀಯ ನೆಲೆಯಲ್ಲಿ ಕಪಟ ಮತ್ತು ರಹಸ್ಯ ಕೋಟಾ ಯೋಜನೆಗಳನ್ನು ಅಮೆರಿಕದ ಸಂವಿಧಾನಕ್ಕೆ ವಿರುದ್ಧವಾಗಿ  ಜಾರಿಗೊಳಿಸುತ್ತಿವೆ.

‘ಏಷ್ಯಾ ಮೂಲದ ವಿದ್ಯಾರ್ಥಿಗಳ ವಿರುದ್ಧ ವ್ಯಾಪಕವಾಗಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದ್ದರೂ ಐವಿ ಲೀಗ್‌ ಕಾಲೇಜುಗಳು, ಬ್ರೌನ್‌ ಯುನಿವರ್ಸಿಟಿ ಹಾಗೂ ಡಾರ್ಟ್‌ಮೌತ್‌ ಕಾಲೇಜುಗಳಲ್ಲಿ  ಏಷ್ಯಾ ಮೂಲದ ವಿದ್ಯಾರ್ಥಿಗಳಿಗೆ ಕನಿಷ್ಠ ಪ್ರಮಾಣದ ಪ್ರವೇಶ ನಿಗದಿಪಡಿಸಿವೆ.  ಯೇಲ್‌ ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಸೀಟುಗಳನ್ನು ಏಷ್ಯಾ ಮೂಲದ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವುದಲ್ಲದೆ ಅದರ ಲಾ ಸ್ಕೂಲ್‌ನಲ್ಲಿ ಏಷ್ಯಾದ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಗಳನ್ನೇ ನಾಶ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿ ಎಎಸಿಇ ಮತ್ತು ಇತರ ಸಂಘಟನೆಗಳು ಈ ದೂರು ಸಲ್ಲಿಸುತ್ತಿವೆ’ ಎಂದು ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಇದು ಮೊದಲಲ್ಲ: ಕಳೆದ ಮೇ ತಿಂಗಳಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದ ವಿರುದ್ಧ ಏಷ್ಯನ್‌ ಅಮೆರಿಕನ್‌ ವಿದ್ಯಾರ್ಥಿಗಳು 64 ಇತರ ಸಂಘಟನೆಗಳೊಂದಿಗೆ ಇದೇ ರೀತಿಯ  ದೂರು ಸಲ್ಲಿಸಿದ್ದವು. ಅತ್ಯಂತ ಅರ್ಹ ವಿದ್ಯಾರ್ಥಿಗಳಿಗೂ ಜನಾಂಗೀಯ ಕಾರಣಕ್ಕಾಗಿ ಐವಿ ಲೀಗ್‌ ಇನ್‌ಸ್ಟಿಟ್ಯೂಷನ್‌ ಪ್ರವೇಶ ನಿರಾಕರಿಸಿತ್ತು ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.