ADVERTISEMENT

ಆತ್ಮಹತ್ಯೆ ಪತ್ರ ಬರೆಯುವಂತೆ ಹೋಮ್‌ವರ್ಕ್‌ ನೀಡಿದ ಶಿಕ್ಷಕ

ಪಿಟಿಐ
Published 25 ಜೂನ್ 2017, 19:30 IST
Last Updated 25 ಜೂನ್ 2017, 19:30 IST
ಆತ್ಮಹತ್ಯೆ ಪತ್ರ ಬರೆಯುವಂತೆ ಹೋಮ್‌ವರ್ಕ್‌ ನೀಡಿದ ಶಿಕ್ಷಕ
ಆತ್ಮಹತ್ಯೆ ಪತ್ರ ಬರೆಯುವಂತೆ ಹೋಮ್‌ವರ್ಕ್‌ ನೀಡಿದ ಶಿಕ್ಷಕ   

ಲಂಡನ್‌: ಷೇಕ್ಸ್‌ಪಿಯರ್‌ ದುರಂತ ನಾಟಕ ‘ಮ್ಯಾಕ್‌ಬೆತ್‌’ ಓದಿನ ಭಾಗವಾಗಿ ವಿದ್ಯಾರ್ಥಿಗಳು ತಮ್ಮ ಪ್ರೀತಿಪಾತ್ರರಿಗೆ ಆತ್ಮಹತ್ಯೆ ಪತ್ರ ಬರೆಯುವಂತೆ ಇಂಗ್ಲಿಷ್‌ ಶಿಕ್ಷಕರೊಬ್ಬರು ಹೋಮ್‌ವರ್ಕ್‌(ಮನೆಪಾಠ) ನೀಡಿದ್ದು, ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಈ ಕುರಿತು ಪೋಷಕರಿಂದ ಆಕ್ರೋಶ ವ್ಯಕ್ತವಾಗಿದ್ದರಿಂದ, ಕಿಡ್‌ಬ್ರೂಕ್‌ನ ಟಾಲಿಸ್‌ ಶಾಲೆಯ ಆಡಳಿತ ಮಂಡಳಿ ಕ್ಷಮೆ ಕೋರಿದೆ.

ನಾಟಕದ ಪ್ರಸಿದ್ಧ ಭಾಗವಾಗಿರುವ, ಲೇಡಿ ಮ್ಯಾಕ್‌ಬೆತ್‌ ಆತ್ಮಹತ್ಯೆ ಮಾಡಿಕೊಳ್ಳುವ ಭಾಗ ಓದಿ ವಿದ್ಯಾರ್ಥಿಗಳು ತಮ್ಮ ಪ್ರೀತಿಪಾತ್ರರನ್ನು ಉದ್ದೇಶಿಸಿ ಆತ್ಮಹತ್ಯೆ ಪತ್ರ ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು. ಇದು ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಪೋಷಕರು ದೂರಿದ್ದರು.

ADVERTISEMENT

ಪೋಷಕರ ಆಕ್ರೋಶ: ಶಾಲೆಯ ಅಸೂಕ್ಷ್ಮ ವರ್ತನೆಯನ್ನು ವಿದ್ಯಾರ್ಥಿನಿಯೊಬ್ಬರ ತಾಯಿ ಟೀಕಿಸಿದ್ದು, ಈಗಾಗಲೇ ತನ್ನ ಮಗಳ ಮೂವರು ಸ್ನೇಹಿತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರೂ ಆಕೆಗೆ ಪತ್ರ ಬರೆಯುವಂತೆ ಸೂಚಿಸಲಾಗಿತ್ತು ಎಂದಿದ್ದಾರೆ.

‘ಈ ವಿಷಯದಿಂದ ನಾನು ತೀವ್ರ ನೊಂದಿದ್ದೇನೆ ಮತ್ತು ಈ ರೀತಿ ಪತ್ರ ಬರೆಯುವುದು ತನಗೆ ಕಿರಿಕಿರಿ ಉಂಟು ಮಾಡುತ್ತಿದೆ’ ಎಂದು ತನ್ನ ಮಗಳು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

‘ಮಕ್ಕಳು ಹಾಗೂ ಯುವಜನರಲ್ಲಿ ಖಿನ್ನತೆ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಿರುವ ಈ ಸಂದರ್ಭದಲ್ಲಿ ಶಾಲೆಯಂತಹ ಸ್ಥಳಗಳಲ್ಲಿ ಈ ರೀತಿ ಅಸೂಕ್ಷ್ಮ ಕೆಲಸ ಮಾಡಬೇಕು ಎಂದು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಇನ್ನೊಬ್ಬ ಪೋಷಕರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.