ADVERTISEMENT

ಉಗ್ರರ ಬಳಿ 18 ಒತ್ತೆಯಾಳುಗಳು

ತಾಲಿಬಾನ್ ಪ್ರಾಬಲ್ಯದ ಪ್ರದೇಶದಲ್ಲಿ ಮಾಲ್ಡೋವಾ ಹೆಲಿಕಾಪ್ಟರ್‌ ಪತನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

ಮಝರ್ ಎ ಷರೀಫ್ (ಎಎಪ್‌ಪಿ): ಆಫ್ಘಾನಿಸ್ತಾನ ಸೈನಿಕರನ್ನು ಕರೆದೊಯ್ಯುತ್ತಿದ್ದ  ಖಾಸಗಿ ಹೆಲಿಕಾಪ್ಟರ್‌ ತಾಲಿಬಾನ್ ಉಗ್ರರ ಪ್ರಾಬಲ್ಯವಿರುವ ಫರ್ಯಾಬ್ ಪ್ರಾಂತ್ಯದಲ್ಲಿ ಬುಧವಾರ ಸಂಜೆ ಪತನಗೊಂಡಿದೆ.

ಅದರಲ್ಲಿದ್ದ ಮೂವರನ್ನು ತಾಲಿಬಾನ್ ಉಗ್ರರು ಕೊಂದಿದ್ದು, ಉಳಿದ 18 ಮಂದಿಯನ್ನು ಒತ್ತೆಯಾಳಾಗಿರಿಸಿ ಕೊಂಡಿದ್ದಾರೆ. ಒತ್ತೆಯಾಳುಗಳ ರಕ್ಷಣೆಗೆ ಆಫ್ಘಾನಿಸ್ತಾನ ಸೇನೆ ಕಾರ್ಯಾಚರಣೆ ಆರಂಭಿಸಿದೆ.

‘ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್‌ ಪತನಗೊಂಡಿದೆ. ನೆಲಕ್ಕೆ ಅಪ್ಪಳಿಸಿದಾಗ ಅದನ್ನು ಉಗ್ರರು ಸುತ್ತುವರಿದಿದ್ದಾರೆ. ಆಗ ಅದರಲ್ಲಿದ್ದ ಆಫ್ಘಾನಿಸ್ತಾನ ಸೈನಿಕರು ಉಗ್ರರತ್ತ ಗುಂಡು ಹಾರಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಉಳಿದವರನ್ನು ಉಗ್ರರು ವಶಕ್ಕೆ ಪಡೆದಿದ್ದಾರೆ’ ಎಂದು ಆಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಹೇಳಿದೆ.

ಒತ್ತೆಯಾಳುಗಳ ರಕ್ಷಣೆಗಾಗಿ ಬುಧ ವಾರ ರಾತ್ರಿಯೇ ಸೇನೆ ಕಾರ್ಯಾಚರಣೆ ಆರಂಭಿಸಿ, ವಿಫಲವಾಗಿತ್ತು. ಹೀಗಾಗಿ ಗುರುವಾರ ಬೆಳಿಗ್ಗೆ ದೊಡ್ಡಮಟ್ಟದ ಕಾರ್ಯಾಚರಣೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರರಿಗೆ ಬಲಿಯಾದವರಲ್ಲಿ ವಿದೇಶಿಗರು ಎಷ್ಟು ಮತ್ತು ಆಫ್ಘಾನಿಸ್ತಾನ ಪ್ರಜೆಗಳೆಷ್ಟು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಜತೆಗೆ ಹೆಲಿಕಾಪ್ಟರ್‌ನಲ್ಲಿದ್ದ ಆಫ್ಘಾನಿಸ್ತಾನದ ಪ್ರಜೆಗಳೆಲ್ಲರೂ ಸೈನಿಕರೇ ಎಂಬ ಮಾಹಿತಿ ನೀಡಲು ರಕ್ಷಣಾ ಸಚಿವಾಲಯ ನಿರಾಕರಿಸಿದೆ.

ಐವರನ್ನು ಕೊಂದಿದ್ದೇವೆ’
ಹೆಲಿಕಾಪ್ಟರ್‌ನಲ್ಲಿದ್ದವರಲ್ಲಿ ಐವರನ್ನು ಕೊಂದಿದ್ದೇವೆ ಎಂದು ತಾಲಿಬಾನ್ ಉಗ್ರರು ಹೇಳಿದ್ದಾರೆ. ಉಳಿದ 16 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಅವರೆಲ್ಲರನ್ನೂ ಸುರಕ್ಷಿತ ಸ್ಥಳದಲ್ಲಿಟ್ಟಿದ್ದೇವೆ. ಅವರ ತನಿಖೆ ನಡೆಸುತ್ತಿದ್ದೇವೆ ಎಂದು ತಾಲಿಬಾನ್ ಉಗ್ರರು ಮಾಹಿತಿ ರವಾನಿಸಿದ್ದಾರೆ.

‘ಹೊಡೆದುರುಳಿಸಲಾಗಿದೆ...’
‘ಅದು ಹೊಚ್ಚಹೊಸ ಹೆಲಿಕಾಪ್ಟರ್‌. ಸಂಪೂರ್ಣ ಸುಸ್ಥಿತಿಯಲ್ಲಿತ್ತು. ತಾಂತ್ರಿಕ ದೋಷ ಉಂಟಾಗುವ ಸಾಧ್ಯತೆಯೇ ಇಲ್ಲ. ಅದನ್ನು ಉಗ್ರರು ಹೊಡೆದುರುಳಿಸಿದ್ದಾರೆ’ ಎಂದು ಹೆಲಿಕಾಪ್ಟರ್‌ ಸೇವಾಸಂಸ್ಥೆ ವಲನ್ ಐಸಿಸಿ ಆರೋಪಿಸಿದೆ. ‘ಹೆಲಿಕಾಪ್ಟರ್‌ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಹೆಲಿಕಾಪ್ಟರ್‌ಗೆ ಗುಂಡು ತಗುಲಿ ಬೆಂಕಿ ಹೊತ್ತಿಕೊಂಡಿದೆ ಎಂದು ನಮ್ಮ ಪೈಲಟ್‌ ನಮಗೆ ತುರ್ತು ಸಂದೇಶ ಕಳುಹಿಸಿದ್ದಾರೆ’ ಎಂದು ವಲನ್ ಐಸಿಸಿ ಮುಖ್ಯಸ್ಥ ಅಲೆಕ್ಸಾಂಡರ್ ಝಗ್ರೆಬೆಲ್ನಿ ಮಾಹಿತಿ ನೀಡಿದ್ದಾರೆ.

ಮಾಲ್ಡೋವಾ ದೇಶ ಮೂಲದ ವಲನ್ ಐಸಿಸಿ ಕಂಪೆನಿ ಆಫ್ಘಾನಿಸ್ತಾನ ಸೇನೆಗೆ ಹೆಲಿಕಾಪ್ಟರ್‌ ಸೇವೆ ಒದಗಿಸುತ್ತಿದೆ.  ಹೆಲಿಕಾಪ್ಟರ್‌ನಲ್ಲಿ ಮಾಲ್ಡೋವಾದ ಇಬ್ಬರು ಪೈಲಟ್‌ಗಳು ಮತ್ತು ಒಬ್ಬ ಎಂಜಿನಿಯರ್ ಇದ್ದರು. ಆಫ್ಘಾನಿಸ್ತಾನದ 18 ಸೈನಿಕರನ್ನು ಅದು ಕರೆದೊಯ್ಯುತ್ತಿತ್ತು.   ಉಗ್ರರ ಒತ್ತೆಯಲ್ಲಿರುವ ನಮ್ಮ ಪ್ರಜೆಗಳ ರಕ್ಷಣೆಗಾಗಿ ಅಮೆರಿಕದ ನೆರವು ಯಾಚಿಸುತ್ತೇವೆ ಎಂದು ಮಾಲ್ಡೋವಾ ಪ್ರಭಾರಿ ಪ್ರಧಾನಿ ಘೋರ್ಘೆ ಬ್ರೆಗಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.