ADVERTISEMENT

ಉಬರ್ ವಿರುದ್ಧ ಪ್ರಕರಣ ದಾಖಲು

ಕಾನೂನು ಬಾಹಿರ ವೈದ್ಯಕೀಯ ದಾಖಲೆ ಪಡೆದ ಆರೋಪ

ಪಿಟಿಐ
Published 16 ಜೂನ್ 2017, 19:30 IST
Last Updated 16 ಜೂನ್ 2017, 19:30 IST

ನ್ಯೂಯಾರ್ಕ್ : ಉಬರ್ ಟ್ಯಾಕ್ಸಿ ಚಾಲಕನಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಭಾರತೀಯ ಮಹಿಳೆ ಈಗ, ತಮ್ಮ ವೈದ್ಯಕೀಯ ದಾಖಲೆ ಕಾನೂನು ಬಾಹಿರವಾಗಿ ಪಡೆದುಕೊಳ್ಳಲಾಗಿದೆ ಎಂದು ದೂರಿ ಉಬರ್‌ ಸಂಸ್ಥೆಯ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೇನ್ ಡೊ ಎಂದಷ್ಟೇ ಈಕೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಉಬರ್ ಸಂಸ್ಥೆ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟ್ರಾವಿಸ್ ಕಲಾನಿಕ್, ಉಬರ್‌ನ ಏಷ್ಯಾ ವ್ಯವಹಾರಗಳ ಮಾಜಿ ಅಧ್ಯಕ್ಷ ಎರಿಕ್ ಅಲೆಕ್ಸಾಂಡರ್ ಮತ್ತು ಪ್ರಕರಣ ನಡೆದ ಸಂದರ್ಭದಲ್ಲಿ ಸಂಸ್ಥೆಯ ವ್ಯವಹಾರಗಳ ಹಿರಿಯ ಉಪಾಧ್ಯಕ್ಷರಾಗಿದ್ದ ಎಮಿಲ್ ಮೈಕಲ್ ಅವರ ವಿರುದ್ಧ ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

‘ಕಾನೂನು ಬಾಹಿರವಾಗಿ  ವೈದ್ಯಕೀಯ ದಾಖಲೆಗಳನ್ನು ಉಬರ್ ಸಂಸ್ಥೆ ಪಡೆದುಕೊಂಡಿದೆ. ಅತ್ಯಾಚಾರದಂಥ ಅಮಾನವೀಯ ಕೃತ್ಯವನ್ನು ಅಲ್ಲಗಳೆಯುವ ಆಕ್ರಮಣಕಾರಿ ಪಿತೂರಿ ನಡೆಸುತ್ತಿದೆ’ ಎಂದು ಪ್ರಸ್ತುತ ಟೆಕ್ಸಾಸ್‌ನಲ್ಲಿ ನೆಲೆಸಿರುವ ಜೇನ್‌ ಹೇಳಿದ್ದಾರೆ. ‘ಗ್ರಾಹಕರೊಂದಿಗೆ ಕ್ರೂರ ಮತ್ತು ಒರಟಾಗಿ ವರ್ತಿಸುವ ‘ಸ್ಟಾರ್ಟ್ ಅಪ್’ ಪದ್ಧತಿಯನ್ನು ಉಬರ್ ಆರಂಭಿಸಿದೆ. ಗ್ರಾಹಕರ ಖಾಸಗಿತನದ ಎಲ್ಲೆ ಮೀರಿ, ಅತ್ಯಾಚಾರ ಸಂಸ್ಕೃತಿಯ ಪಾಲನೆ ಮಾಡುತ್ತಿದೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

ಮಹಿಳೆ ನಿಜವಾಗಿಯೂ ಅತ್ಯಾಚಾರಕ್ಕೆ ಒಳಗಾಗಿದ್ದರೇ ಅಥವಾ ದೇಶದಲ್ಲಿ ತನ್ನ ವ್ಯವಹಾರಕ್ಕೆ ಧಕ್ಕೆ ಉಂಟು ಮಾಡಲು ಪ್ರತಿಸ್ಪರ್ಧಿ ‘ಓಲಾ’ ಸಂಸ್ಥೆ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನವನ್ನೂ ಉಬರ್ ವ್ಯಕ್ತಪಡಿಸಿತ್ತು. ಇದರ ವಿರುದ್ಧವೂ ದೂರುದಾರರು ಆಕ್ಷೇಪ ಎತ್ತಿದ್ದಾರೆ.

ಘಟನೆ ಬಳಿಕ ನೇರವಾಗಿ ದೆಹಲಿಗೆ ತೆರಳಿದ್ದ ಅಲೆಕ್ಸಾಂಡರ್‌,  ಅತ್ಯಾಚಾರದ ನಂತರ ಸಂತ್ರಸ್ತೆಯ ಪರೀಕ್ಷೆ ನಡೆಸಿದ್ದ ವೈದ್ಯಕೀಯ ವರದಿಗಳನ್ನು ಪಡೆದುಕೊಳ್ಳಲು ಸಫಲರಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಚಾಲಕರ ನೇಮಕದಲ್ಲಿ ಉಬರ್‌ ನಿರ್ಲಕ್ಷ್ಯ ತೋರಿದ್ದೇ ತಮ್ಮ ಮೇಲಿನ ಅತ್ಯಾಚಾರಕ್ಕೆ ಕಾರಣ ಎಂದು ದೂರಿ  2015ರ ಜನವರಿಯಲ್ಲಿ ಉಬರ್‌ ವಿರುದ್ಧ ಜೇನ್‌ ಪ್ರಕರಣ ದಾಖಲಿಸಿದ್ದರು. ಆದರೆ  ಫೆಬ್ರುವರಿಯಲ್ಲಿ ಅವರು ಅದನ್ನು ವಾಪಸ್‌ ಪಡೆದುಕೊಂಡಿದ್ದರು.

ಉಬರ್ ಚಾಲಕ ಶಿವಕುಮಾರ್ ಯಾದವ್ 2014ರ ಡಿಸೆಂಬರ್‌ನಲ್ಲಿ ತಮ್ಮ ಮಾನಭಂಗ ಮಾಡಿದ್ದರೆ, ಈಗ ಸಂಸ್ಥೆ ಎರಡನೇ ಬಾರಿಗೆ ಆ ಕೆಲಸ ಮಾಡುತ್ತಿದೆ ಎಂದು ಜೇನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.