ADVERTISEMENT

ಎಂಐಟಿ: ‘ಡಿಜಿಟಲ್‌ ಇಂಡಿಯಾ’ಚರ್ಚೆ

ಪಿಟಿಐ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ವಾಷಿಂಗ್ಟನ್‌: ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ‘ಡಿಜಿಟಲ್‌ ಇಂಡಿಯಾ’ ಯೋಜನೆ ಅಮೆರಿಕದ ಪ್ರತಿಷ್ಠಿತ ಮೆಸಾಚ್ಯುಸೆಟ್ಸ್‌ ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ಗಮನ ಸೆಳೆದಿದೆ. 
 
ಸಂಸ್ಥೆ ‘ಡಿಜಿಟಲ್‌ ಇಂಡಿಯಾ’ವನ್ನು  ಈ ವರ್ಷದ ಸಮಾವೇಶದ ಮುಖ್ಯ ವಿಷಯವಾಗಿ ಆಯ್ಕೆ ಮಾಡಿಕೊಂಡಿದೆ. ಸಮಾವೇಶದಲ್ಲಿ ನಡೆಯಲಿರುವ ‘ಡಿಜಿಟಲ್‌ ಇಂಡಿಯಾ’ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಅವರನ್ನು ಎಂಐಟಿ ವಿದ್ಯಾರ್ಥಿಗಳು ಆಹ್ವಾನಿಸಿದ್ದಾರೆ. 
 
ಡಿಜಿಟಲೀಕರಣದಿಂದ ಭಾರತದಲ್ಲಿ ಆಗಿರುವ ಪ್ರಗತಿ, ಮುಂದಿನ ಸವಾಲುಗಳು, ಸಾಮಾಜಿಕ ಮತ್ತು ಆರ್ಥಿಕ ವಲಯದ ಮೇಲಾಗಿರುವ ಪರಿಣಾಮಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. 
 
‘ನಮ್ಮ ಸರ್ಕಾರ ಆರಂಭಿಸಿರುವ ಡಿಜಿಟಲ್‌ ಇಂಡಿಯಾ, ಕೌಶಲ ಭಾರತ, ಸ್ಟಾಂಡ್‌ಅಪ್‌ ಭಾರತ, ಆಧಾರ್‌್ ಮುಂತಾದ ಕಾರ್ಯಕ್ರಮಗಳು ವಿಶ್ವದ ಅತ್ಯುತ್ತಮ ಸಂಸ್ಥೆಗಳಲ್ಲಿ ಕುತೂಹಲ ಮೂಡಿರುವುದು ಸಂತಸ ತರುವ ವಿಷಯವಾಗಿದೆ’ ಎಂದು ರವಿಶಂಕರ್‌್ ಅವರು ಹೇಳಿದ್ದಾಗಿ ಎಂಐಟಿ ಆಯೋಜಕರಲ್ಲಿ  ಒಬ್ಬರಾದ ರಾಕೇಶ್‌ ಶ್ರೀಧರ್‌ಹೇಳಿದ್ದಾರೆ. 
 
ಬೋಸ್ಟನ್‌ನಲ್ಲಿ ಏ.9ರಂದು ನಡೆಯಲಿರುವ ಸಮಾವೇಶದಲ್ಲಿ ಪ್ರಸಾದ್‌ ಅವರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಆಯೋಜಕ ಪ್ರಿಯಾಂಕ 
ಚತುರ್ವೇದಿ ತಿಳಿಸಿದ್ದಾರೆ. ಹಿಂದಿನ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ  ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ, ಚಿತ್ರ ನಿರ್ದೇಶಕರಾದ ಅನುರಾಗ್‌ ಕಶ್ಯಪ್‌, ಶೇಖರ್‌ ಕಪೂರ್‌್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.