ADVERTISEMENT

ಎರಡು ಬಾರಿ ಜನಿಸಿದ ಹೆಣ್ಣುಮಗು

ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಪಿಟಿಐ
Published 25 ಅಕ್ಟೋಬರ್ 2016, 19:30 IST
Last Updated 25 ಅಕ್ಟೋಬರ್ 2016, 19:30 IST
ಎರಡು ಬಾರಿ ಜನಿಸಿದ ಹೆಣ್ಣುಮಗು
ಎರಡು ಬಾರಿ ಜನಿಸಿದ ಹೆಣ್ಣುಮಗು   

ಹ್ಯೂಸ್ಟನ್‌ : ಇಲ್ಲಿನ ಆಸ್ಪತ್ರೆಯೊಂದರಲ್ಲಿ ಹೆಣ್ಣುಮಗುವೊಂದು ಎರಡು ಬಾರಿ ಜನಿಸಿರುವ ಅಪರೂಪದ ಘಟನೆ ನಡೆದಿದೆ. ತಾಯಿ 23 ವಾರಗಳ ಗರ್ಭಿಣಿಯಾಗಿದ್ದಾಗ ಒಮ್ಮೆ ಮಗುವನ್ನು  ಹೊರತೆಗೆದಿದ್ದ ವೈದ್ಯರು, ಮಗುವಿಗೆ 20 ನಿಮಿಷಗಳ ಶಸ್ತ್ರಚಿಕಿತ್ಸೆ ನಡೆಸಿ ಮತ್ತೆ ತಾಯಿಯ ಗರ್ಭದೊಳಗಿಟ್ಟಿದ್ದರು. ಈಗ ಒಂಬತ್ತು ತಿಂಗಳು ಪೂರ್ಣಗೊಂಡ ಬಳಿಕ ತಾಯಿ ಸಹಜವಾಗಿ ಪುನಃ ಮಗುವನ್ನು ಹೆತ್ತಿದ್ದಾರೆ.

ಅಮೆರಿಕದ ಮಾರ್ಗರೆಟ್‌ ಬೊಮರ್‌ ಅವರು 16 ವಾರದ ಗರ್ಭಿಣಿಯಾಗಿದ್ದಾಗ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಮಗುವಿನ ಬೆನ್ನುಮೂಳೆಯ ತುದಿಯಲ್ಲಿ ಗೆಡ್ಡೆ (ಸ್ಯಾಕ್ರೊಕಾಸಿಗೆಲ್‌ ಟ್ಯೂಮರ್‌) ಬೆಳೆಯುತ್ತಿರುವುದನ್ನು ಪತ್ತೆಮಾಡಿದ್ದರು.

‘ಇಂಥ ಗೆಡ್ಡೆಗಳು ಕ್ರಮೇಣ ಮಗುವಿನಲ್ಲಿ ಹರಿಯುವ ರಕ್ತವನ್ನು ಹೀರಿಕೊಂಡು ಮಗುವಿನಂತೆಯೇ ಬೆಳವಣಿಗೆ ಹೊಂದುತ್ತವೆ. ಒಂದು ಹಂತದಲ್ಲಿ ಗೆಡ್ಡೆ ಮತ್ತು ಮಗುವಿನ ನಡುವೆ ಪೈಪೋಟಿ ಉಂಟಾಗಿ, ಎರಡೂ  ಕಡೆ ರಕ್ತ ಪೂರೈಸಲಾಗದೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದು ವೈದ್ಯರು ತಿಳಿಸಿದರು.

ಈ ಪ್ರಕರಣದಲ್ಲಿ ಗೆಡ್ಡೆ ಭ್ರೂಣಕ್ಕಿಂತ ದೊಡ್ಡದಾದ ನಂತರ ತುರ್ತು ಶಸ್ತ್ರ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದರು. ವೈದ್ಯರಾದ ಕಾಸ್‌ ಮತ್ತು ಒಲುಯಿಂಕಾ ಒಲುಟೊಯಿ ಸತತ ಐದು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮಗುವಿಗೆ ಮರು ಜನ್ಮ ನೀಡಿದ್ದಾರೆ. "

ಒಟ್ಟಾರೆ 5 ಗಂಟೆಯ ಶಸ್ತ್ರಚಿಕಿತ್ಸೆಯಲ್ಲಿ 20ನಿಮಿಷಗಳ ಚಿಕಿತ್ಸೆಯನ್ನು ಮಗುವಿಗೆ ನೀಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ವೈದ್ಯರು ಮಗುವನ್ನು ಪುನಃ ಗರ್ಭಕೋಶದೊಳಗೆ ಸೇರಿಸಿದರು. ಇದಾಗಿ 12 ವಾರಗಳ ನಂತರ ಮಹಿಳೆ ಮಗುವಿಗೆ ಮರುಜನ್ಮ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.