ADVERTISEMENT

‘ಐಎಸ್‌ನತ್ತ ಆಕರ್ಷಿತನಾಗಿದ್ದ ಶಂಕಿತ’

ಏಜೆನ್ಸೀಸ್
Published 9 ಏಪ್ರಿಲ್ 2017, 19:30 IST
Last Updated 9 ಏಪ್ರಿಲ್ 2017, 19:30 IST
ಸ್ಟಾಕ್‌ಹೋಮ್: ಶುಕ್ರವಾರ ಟ್ರಕ್ ದಾಳಿ ನಡೆಸಿ ನಾಲ್ವರ ಸಾವಿಗೆ ಕಾರಣನಾದ ಶಂಕಿತ ವ್ಯಕ್ತಿಯು ಉಗ್ರ ಸಂಘಟನೆ ಐಎಸ್‌ನತ್ತ ಆಕರ್ಷಿತನಾಗಿದ್ದ ಎಂದು ಸ್ವೀಡನ್ ಪೊಲೀಸರು ತಿಳಿಸಿದ್ದಾರೆ.
 
ಟ್ರಕ್ ದಾಳಿ ಪ್ರಕರಣ ಸಂಬಂಧ ಎರಡನೇ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸ್ಟಾಕ್‌ಹೋಮ್ ಜಿಲ್ಲಾ ನ್ಯಾಯಾಲಯ ತಿಳಿಸಿದೆ. ಉಗ್ರವಾದದ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ ಸಾವಿರಾರು ಜನರು, ಹೂ ಹಾಗೂ ಮೇಣದ ಬತ್ತಿ ಹಿಡಿದು  ಮೃತರಿಗೆ ಗೌರವ ಸಲ್ಲಿಸಿದರು.
 
ಹಿಟ್‌ಲಿಸ್ಟ್‌ನಲ್ಲಿ ಬಿಬಿಸಿ ಸುದ್ದಿವಾಚಕರು
ಲಂಡನ್: ಐಎಸ್ ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಬಿಬಿಸಿ ಹಾಗೂ ಸ್ಕೈ ನ್ಯೂಸ್‌ನ ಪ್ರಮುಖ ಸುದ್ದಿವಾಚಕರು ಇದ್ದಾರೆ ಎಂದು ವರದಿಯಾಗಿದೆ. ಸುದ್ದಿವಾಚಕರು ಏಕಾಂಗಿಯಾಗಿ ಸಿಕ್ಕಕೂಡಲೇ ಅವರ ಮೇಲೆ ದಾಳಿ ನಡೆಸುವಂತೆ ತನ್ನ ಬೆಂಬಲಿಗರಿಗೆ ಐಎಸ್‌ ಸೂಚನೆ ನೀಡಿರುವ ಅಂಶ ಅದರ ವೆಬ್‌ಸೈಟ್‌ನಲ್ಲಿ ಇದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. 
 
ಲಾಡೆನ್‌ ಹತ್ಯೆ: ಹೊಸ ಮಾಹಿತಿ ಬಹಿರಂಗ
ನ್ಯೂಯಾರ್ಕ್‌:  ಅಲ್‌ ಕೈದಾ ಮುಖ್ಯಸ್ಥ ಒಸಾಮ ಬಿನ್‌ ಲಾಡೆನ್‌ ಹತ್ಯೆಯಾದಾಗ ಆತನ ಮುಖ ಗುರುತುಹಿಡಿಯಲಾಗದ ರೀತಿ ಇತ್ತು ಎಂದು ಹತ್ಯೆ ಮಾಡಿದ ಅಮೆರಿಕ ನೌಕಾಪಡೆಯ ಸೀಲ್‌ (ಸಿಇಎಎಲ್‌) ತಂಡದ ಮಾಜಿ ಸದಸ್ಯರೊಬ್ಬರು ಹೇಳಿಕೊಂಡಿದ್ದಾರೆ. 
 
2011ರ ಮೇ 2 ರಂದು ಲಾಡೆನ್‌ಗೆ ಸೀಲ್‌ ತಂಡದ ರಾಬರ್ಟ್‌ ಒ ನೇಲ್‌ ಅವರೊಬ್ಬರೇ 3 ಗುಂಡಿಟ್ಟು ಹತ್ಯೆ ಮಾಡಿದ್ದರು. ತಲೆ ಛಿದ್ರವಾಗಿದ್ದರಿಂದ ಮತ್ತೆ ಅದನ್ನು ಒಟ್ಟಾಗಿ ಸೇರಿಸಿ ಗುರುತು ಹಿಡಿಯುವಂತೆ ಮಾಡಬೇಕಾಯಿತು ಎಂದು  ನೇಲ್‌ ತಿಳಿಸಿದ್ದಾಗಿ ಪುಸ್ತಕವೊಂದರಲ್ಲಿ ಹೇಳಲಾಗಿದೆ.
 
ಇಬ್ಬರಿಗೆ ಗುಂಡು ಹಾರಿಸಿ ವ್ಯಕ್ತಿ ಆತ್ಮಹತ್ಯೆ
ಕೋರಲ್‌ ಗ್ಯಾಬ್ಲೆಸ್‌, ಫ್ಲಾರಿಡಾ:  ಇಲ್ಲಿನ ಮಾಲ್‌ವೊಂದರಲ್ಲಿ  ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿಯೊಬ್ಬ  ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 
‘ಗುಂಡಿನ ದಾಳಿಯಲ್ಲಿ  ಗಾಯಗೊಂಡಿದ್ದ ವ್ಯವಸ್ಥಾಪಕರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೊಬ್ಬರಿಗೆ ತೀವ್ರ ಗಾಯಗಳಾಗಿವೆ’ ಎಂದು ಪೊಲೀಸರು ಹೇಳಿದ್ದಾರೆ.
 
‘ಗುಂಡು ಹಾರಿಸಿದ ವ್ಯಕ್ತಿ ಈ ಹಿಂದೆ ಜಿಮ್‌ವೊಂದರ  ನೌಕರನಾಗಿದ್ದ., ವ್ಯವಸ್ಥಾಪಕನ ಜತೆಗಿನ ಮನಸ್ತಾಪವೇ ದಾಳಿಗೆ ಕಾರಣವಾಗಿರಬಹುದು’ ಎಂದು   ಅಧಿಕಾರಿಗಳು ತಿಳಿಸಿದ್ದಾರೆ.
 
ಉತ್ತರ ಕೊರಿಯಾ ವಿರುದ್ಧ  ಅಕ್ರೋಶ
ವಾಷಿಂಗ್ಟನ್‌: ಪದೇ ಪದೇ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾ ವಿರುದ್ಧ ತಿರುಗಿಬಿದ್ದಿರುವ ಅಮೆರಿಕ, ಕೊರಿಯಾ ಪರ್ಯಾಯ ದ್ವೀಪಕ್ಕೆ ವಿಮಾನ ವಾಹಕ ಯುದ್ಧನೌಕೆಯೊಂದನ್ನು ಕಳುಹಿಸಿದೆ. ಈ ಮಾಹಿತಿಯನ್ನು ಅಮೆರಿಕದ ನೌಕಾಪಡೆ ಬಹಿರಂಗ ಮಾಡಿದೆ.   ಅಮೆರಿಕದ ಈ ಕ್ರಮ ಪ್ರಾಂತ್ಯದಲ್ಲಿ  ಇನ್ನಷ್ಟು ಆತಂಕ ಹೆಚ್ಚಿಸಲಿದೆ ಎನ್ನಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.