ADVERTISEMENT

ಐತಿಹಾಸಿಕ ಪರಮಾಣು ಒಪ್ಪಂದಕ್ಕೆ ಇರಾನ್‌ ಸಹಿ

ದಶಕದ ಬಿಕ್ಕಟ್ಟು ಇತ್ಯರ್ಥ, ಆರ್ಥಿಕ ದಿಗ್ಬಂಧನ ವಾಪಸ್‌, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2015, 20:21 IST
Last Updated 14 ಜುಲೈ 2015, 20:21 IST

ವಿಯೆನ್ನಾ (ಎಎಫ್‌ಪಿ/ರಾಯಿಟರ್ಸ್‌): ಇರಾನ್‌ ಮತ್ತು ವಿಶ್ವದ ಆರು ಪ್ರಮುಖ ರಾಷ್ಟ್ರಗಳ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, ಐತಿಹಾಸಿಕ ಪರಮಾಣು ಒಪ್ಪಂದಕ್ಕೆ ಮಂಗಳವಾರ ಸಹಿ ಬಿದ್ದಿದೆ. ಇದರಿಂದಾಗಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕಗ್ಗಂಟಾಗಿ ಉಳಿದಿದ್ದ  ಸಮಸ್ಯೆ ಬಗೆಹರಿದಂತಾಗಿದೆ.

ಪರಮಾಣು ಕಾರ್ಯಕ್ರಮಗಳ ಮೂಲಕ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದ್ದ ಇರಾನ್‌ ಅಣ್ವಸ್ತ್ರ ಹೊಂದುವ ಸಾಧ್ಯತೆಗಳನ್ನು ಈ ಒಪ್ಪಂದ ಇಲ್ಲವಾಗಿಸಿದೆ. ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ವಿಶ್ವಸಂಸ್ಥೆ ಹೇರಿದ್ದ ಆರ್ಥಿಕ ಹಾಗೂ ವಾಣಿಜ್ಯ ದಿಗ್ಬಂಧನಗಳಿಂದ ಇರಾನ್ ಮುಕ್ತವಾಗಲಿದೆ.

ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಪ್ರವೇಶಿಸಲು ಇರಾನ್‌ಗೆ ಅವಕಾಶ ದೊರೆತಿದ್ದು, ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದೆ. ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್‌, ಚೀನಾ, ಫ್ರಾನ್ಸ್‌, ರಷ್ಯಾ ಅಲ್ಲದೆ ಜರ್ಮನಿ ಪ್ರತಿನಿಧಿಗಳು ಇಲ್ಲಿ ಕಳೆದ 18 ದಿನಗಳಿಂದ ಇರಾನಿನ ಪ್ರತಿನಿಧಿಗಳ ಜೊತೆ ನಡೆಸಿದ ಸತತ ಮಾತುಕತೆಯ ಬಳಿಕ ಈ ಒಪ್ಪಂದ ಮೂಡಿಬಂದಿದೆ.

ಮಿಶ್ರ ಪ್ರತಿಕ್ರಿಯೆ: ‘ಇದೊಂದು ಐತಿಹಾಸಿಕ ಒಪ್ಪಂದ’ ಎಂದು ವಿವಿಧ ರಾಷ್ಟ್ರಗಳು ಬಣ್ಣಿಸಿವೆ. ಆದರೆ ಇರಾನ್‌ನ ಬದ್ಧ ವೈರಿ ಇಸ್ರೇಲ್‌ ಈ ಒಪ್ಪಂದವನ್ನು ‘ಐತಿಹಾಸಿಕ ಪ್ರಮಾದ’ ಎಂದು ಟೀಕಿಸಿದೆ. ಈ ಒಪ್ಪಂದವು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಅವರಿಗೆ ದೊರೆತ ‘ರಾಜಕೀಯ ಗೆಲುವು’ ಎಂದು ಬಣ್ಣಿಸಲಾಗಿದೆ.

‘ಭರವಸೆಯ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇವೆ’ ಎಂದಿರುವ ಇರಾನ್‌ ವಿದೇಶಾಂಗ ಸಚಿವ ಮೊಹಮ್ಮದ್‌ ಜವಾದ್‌ ಜರೀಫ್‌, ‘ನಾವು ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಇದನ್ನು ಪರಿಪೂರ್ಣ ಎನ್ನುವಂತಿಲ್ಲ. ಆದರೆ ನಮಗೆ ಇಷ್ಟು ಮಾತ್ರ ಸಾಧಿಸಲು ಸಾಧ್ಯ. ಇದು ಬಲುದೊಡ್ಡ ಸಾಧನೆ’ ಎಂದಿದ್ದಾರೆ. ಪರಮಾಣು ಸಂಸ್ಕರಣೆ ನೆಪದಲ್ಲಿ ಇರಾನ್‌ ಅಣ್ವಸ್ತ್ರ್ರ ತಯಾರಿಸುತ್ತಿದೆ ಎಂದು ಅಮೆರಿಕ ಮತ್ತಿತರ ಬಲಾಢ್ಯ ದೇಶಗಳು ಆರೋಪಿಸುತ್ತಾ ಬಂದಿದ್ದವು. ಆದರೆ ಇರಾನ್‌ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿತ್ತು.

ಅಣು ಕಾರ್ಯಕ್ರಮಕ್ಕೆ ನಿಯಂತ್ರಣ: ಹೊಸ ಒಪ್ಪಂದದ ಪ್ರಕಾರ, ಇರಾನ್‌ ತನ್ನ ಪರಮಾಣು ಸಂಸ್ಕರಣಾ ಕಾರ್ಯಕ್ರಮವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸಲಿದೆ. ‘ಯುರೇನಿಯಂ ಸಂಸ್ಕರಿಸಿ ಪರಮಾಣು ಇಂಧನ ಮತ್ತು ವಿದ್ಯುತ್‌ ತಯಾರಿಸಲು ನೆರವಾಗುವ ಸೆಂಟ್ರಿಫ್ಯೂಜಸ್‌ ಸಂಖ್ಯೆಯನ್ನು ಈಗಿರುವ 19 ಸಾವಿರದಿಂದ 6,104ಕ್ಕೆ ತಗ್ಗಿಸಲಾಗುವುದು’ ಎಂದು ಇರಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯು (ಐಎಇಎ)  ಅಣು ಸ್ಥಾವರಗಳ ತಪಾಸಣೆ ನಡೆಸುವುದಕ್ಕೆ ಇರಾನ್‌ ಅವಕಾಶ ನೀಡಿದೆ. ‘ಇರಾನ್‌ನ ಸೇನಾ ನೆಲೆಗಳ ಕೆಲವೊಂದು ಭಾಗಗಳ ತಪಾಸಣೆಗೂ ಐಎಇಎಗೆ ಅವಕಾಶ ನೀಡಲು ಒಪ್ಪಿಕೊಂಡಿದ್ದೇವೆ’ ಎಂದು  ಅಧಿಕಾರಿಯೊಬ್ಬರು ಹೇಳಿದ್ದಾರೆ.

ತೈಲ ಮಾರಾಟಕ್ಕೆ ಅನುಮತಿ: ಒಪ್ಪಂದದ ಷರತ್ತುಗಳನ್ನು ಪೂರ್ಣವಾಗಿ ಪಾಲಿಸಿದರೆ ಇರಾನ್‌ಗೆ ತನ್ನ ತೈಲವನ್ನು ಮಾರಾಟ ಮಾಡಲು ಅನುಮತಿ ದೊರೆಯಲಿದೆ. ಅದೇ ರೀತಿ ವಿಶ್ವಸಂಸ್ಥೆ ಮತ್ತು ಅಮೆರಿಕ ಮುಟ್ಟುಗೋಲು ಹಾಕಿರುವ ಅಂದಾಜು ರೂ6.34 ಲಕ್ಷ ಕೋಟಿ ಮೌಲ್ಯದ ಆಸ್ತಿಗಳ ಬಳಕೆಗೆ ಅವಕಾಶ ದೊರೆಯಲಿದೆ. ‘ಒಪ್ಪಂದದ ಷರತ್ತು ಉಲ್ಲಂಘಿಸಿದರೆ 65 ದಿನಗಳ ಒಳಗಾಗಿ ದಿಗ್ಬಂಧನವನ್ನು ಮತ್ತೆ ಹೇರಲು ಅವಕಾಶವಿದೆ’  ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪರಮಾಣು ಒಪ್ಪಂದವು ಹೊಸ ಶಕೆಯ ಆರಂಭಕ್ಕೆ ನಾಂದಿ ಹಾಡಿದೆ. ಇದುವರೆಗೆ ಇದ್ದಂತಹ ಅನಗತ್ಯ ಬಿಕ್ಕಟ್ಟು ಕೊನೆಗೊಂಡಿದೆ
-ಹಸನ್‌ ರೌಹಾನಿ,
ಇರಾನ್‌ ಅಧ್ಯಕ್ಷ

ಮುಖ್ಯಾಂಶಗಳು
* ಆರು ದೇಶಗಳೊಂದಿಗಿನ ಮಾತುಕತೆ ಯಶಸ್ವಿ
* ಇರಾನ್‌ ಅಣ್ವಸ್ತ್ರ ಹೊಂದಲು ಅವಕಾಶವಿಲ್ಲ
* ‘ಐತಿಹಾಸಿಕ ಪ್ರಮಾದ’: ಇಸ್ರೇಲ್‌ ಟೀಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.