ADVERTISEMENT

ಕ್ಯೂಬಾ ತಲುಪಿದ ಅಮೆರಿಕದ ಹಡಗು

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:54 IST
Last Updated 2 ಮೇ 2016, 19:54 IST
ಫಾಥಮ್ ಸರಣಿಯ ಅಡೊನಿಯ ನೌಕೆಯು ಅಮೆರಿಕದ ಮಿಯಾಮಿಯಿಂದ ಪ್ರಯಾಣಿಕರನ್ನು ಹೊತ್ತು ಕ್ಯೂಬಾದತ್ತ  ಹೊರಟ ಕ್ಷಣ – ಎಎಫ್‌ಪಿ ಚಿತ್ರ
ಫಾಥಮ್ ಸರಣಿಯ ಅಡೊನಿಯ ನೌಕೆಯು ಅಮೆರಿಕದ ಮಿಯಾಮಿಯಿಂದ ಪ್ರಯಾಣಿಕರನ್ನು ಹೊತ್ತು ಕ್ಯೂಬಾದತ್ತ ಹೊರಟ ಕ್ಷಣ – ಎಎಫ್‌ಪಿ ಚಿತ್ರ   

ಮಿಯಾಮಿ, ಅಮೆರಿಕ (ಎಪಿ):  ಕಮ್ಯುನಿಸ್ಟ್ ದೇಶ ಕ್ಯೂಬಾ ಮತ್ತು ಅಮೆರಿಕದ ನಡುವಣ ಅರ್ಧ ಶತಮಾನದ ಶೀತಲ ಸಮರ ಕೊನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಮಿಯಾಮಿಯಿಂದ ಸಮುದ್ರ ಯಾನ ಕೈಗೊಂಡಿದ್ದ  ಅಮೆರಿಕದ ನೌಕೆ ‘ಲೈನ್ಸ್‌ ಅಡೊನಿಯ’ ಸೋಮವಾರ ಹವಾನಾ ತಲುಪಿತು.

ಇಲ್ಲಿನ ಬಂದರಿನಿಂದ ಭಾನುವಾರ ಸಂಜೆ ಅಮರಿಕದ ಕಾಲಮಾನ 4.24ಕ್ಕೆ ಅಡಿನಿಯಾ ನೌಕೆಯು 704 ಪ್ರಯಾಣಿಕರನ್ನು ಹೊತ್ತು ಕ್ಯೂಬಾಗೆ ಐತಿಹಾಸಿಕ ಪ್ರಯಾಣ ಆರಂಭಿಸಿತ್ತು.

ಕಾರ್ನಿವಲ್ ಕಾರ್ಪ್‌ ಸಂಸ್ಥೆಗೆ ಸೇರಿದ ಫಾಥಮ್ ಸರಣಿಯ ನೌಕೆಯು ಏಳು ದಿನಗಳ ಪ್ರಯಾಣದಲ್ಲಿ ಕ್ಯೂಬಾದ ಹವಾನ ತೀರ, ಸ್ಯಾಂಟಿಯಾಗೊ ಡಿ, ಸಿಯಾನ್ಫುಗಾಸ್‌ನಲ್ಲಿ ಸಂಚರಿಸಲಿದೆ. 1978ರಲ್ಲಿ ಇಂತಹುದೇ ನೌಕೆ ಅಮೆರಿಕದಿಂದ ಕ್ಯೂಬಾಗೆ ಪ್ರಯಾಣ ಬೆಳೆಸಿತ್ತು.

ಕ್ಯೂಬಾ ಪ್ರಜೆಗಳು ಸಮುದ್ರಮಾರ್ಗದಲ್ಲಿ ಕ್ಯೂಬಾ ಪ್ರವೇಶ ನಿಷೇಧ ನೀತಿಯನ್ನು ಇತ್ತೀಚೆಗೆ ಆ ಸರ್ಕಾರ ಕೈಬಿಟ್ಟ ಬಳಿಕ ಅಮೆರಿಕದಿಂದ ಮೊದಲ ನೌಕೆ ಕ್ಯೂಬಾ ಪ್ರವೇಶಿಸುತ್ತಿದೆ. ಅಮೆರಿಕದಲ್ಲಿರುವ ಕ್ಯೂಬಾ ಜನರು ನೌಕೆಯಲ್ಲಿ ಪ್ರಯಾಣಿಸುತ್ತಿದ್ದಾರೆ.

2014ರ ಡಿಸೆಂಬರ್ 17ರಂದು ಅಮೆರಿಕದ ಅಧ್ಯಕ್ಷ ಒರಾಕ್ ಒಬಾಮ ಅವರು ಹಿಂದಿನ ವೈಮನಸ್ಯ ಮರೆತು, ಕ್ಯೂಬಾದೊಂದಿಗೆ ರಾಜತಾಂತ್ರಿಕ ಸಂಬಂಧ ಮುಂದುವರಿಸುವುದಾಗಿ ಐತಿಹಾಸಿಕ ನಿರ್ಧಾರ ಪ್ರಕಟಿಸಿದ್ದರು.

ವಾರ ಬಿಟ್ಟು ವಾರ ಮಿಯಾಮಿಯಿಂದ ಕ್ಯೂಬಾಗೆ ಈ ನೌಕೆ ಪ್ರಯಾಣಿಸಲಿದೆ. ಒಬ್ಬರಿಗೆ 1800 ಅಮೆರಿಕನ್ ಡಾಲರ್ ದರ ವಿಧಿಸಲಾಗಿದೆ. ಪ್ರಯಾಣದ ವೇಳೆ ಸಾಂಸ್ಕೃತಿಕ ಚಟುವಟಿಕೆಗಳು, ಸ್ಪ್ಯಾನಿಷ್ ಪಾಠಗಳನ್ನು ಹೇಳಿಕೊಡಲಾಗುತ್ತದೆ.

ಮೊದಲ ಕ್ಯೂಬಾ ಕ್ರಾಂತಿಯ ಬಳಿಕ ಗಡಿಪಾರು ಮಾಡಿದವರು ಮತ್ತೆ ದೇಶದ ಮೇಲೆ ದಾಳಿ ಮಾಡುವ ಅಪಾಯ ಇದ್ದುದರಿಂದ ಸಮುದ್ರಯಾನವನ್ನು ಕ್ಯೂಬಾ ನಿಷೇಧಿಸಿತ್ತು. ಇದನ್ನು ಪ್ರಶ್ನಿಸಿ ಅಮೆರಿಕದ ಕ್ಯೂಬನ್ನರು ದಾವೆ ಹೂಡಿದ್ದರು. ಏಪ್ರಿಲ್ 22ರಂದು ಕ್ಯೂಬಾ ಈ ನಿಷೇಧವನ್ನು ತೆಗೆದುಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.