ADVERTISEMENT

ಕ್ಷಮಾದಾನಕ್ಕೆ ಜಾಧವ್‌ ಅರ್ಜಿ

ಪಿಟಿಐ
Published 22 ಜೂನ್ 2017, 19:49 IST
Last Updated 22 ಜೂನ್ 2017, 19:49 IST
ಕ್ಷಮಾದಾನಕ್ಕೆ ಜಾಧವ್‌ ಅರ್ಜಿ
ಕ್ಷಮಾದಾನಕ್ಕೆ ಜಾಧವ್‌ ಅರ್ಜಿ   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಸಹಾನುಭೂತಿಯ ಆಧಾರದ ಮೇಲೆ ಕ್ಷಮಾದಾನ ನೀಡುವಂತೆ ಕೋರಿ ಅಲ್ಲಿಯ ಸೇನಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಿದ್ದಾರೆ.

ಭಾರತದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನ ಸೇನಾ ನ್ಯಾಯಾಲಯ ಜಾಧವ್‌ ಅವರಿಗೆ   ಮರಣದಂಡನೆ ವಿಧಿಸಿತ್ತು.

ಈ ಶಿಕ್ಷೆ ಜಾರಿಗೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ)  ತಡೆಯಾಜ್ಞೆ  ನೀಡಿದ ವಾರದ ಬಳಿಕ ಈ ಬೆಳವಣಿಗೆ ನಡೆದಿದೆ. 

ADVERTISEMENT

ಜಾಧವ್‌ ಎರಡನೇ ತಪ್ಪೊಪ್ಪಿಗೆ ಹೇಳಿಕೆಯುಳ್ಳ ವಿಡಿಯೊವನ್ನು ಪಾಕ್‌ ಸೇನೆ ಬಿಡುಗಡೆ ಮಾಡಿದೆ.

‘ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸುವ ಜತೆಗೆ ಭಯೋತ್ಪಾದಕ ಹಾಗೂ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಬಗ್ಗೆ ಜಾಧವ್‌ ತಪ್ಪೊಪ್ಪಿಕೊಂಡಿದ್ದಾರೆ. ಅಮಾಯಕ ಜೀವಗಳ ಬಲಿ ಪಡೆದ    ಮತ್ತು ಆಸ್ತಿಪಾಸ್ತಿಗಳಿಗೆ  ತೀವ್ರ ಹಾನಿ ಮಾಡಿದ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ’ ಎಂದು ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗವು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ತನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಸಹಾನುಭೂತಿ ಆಧಾರದ ಮೇಲೆ ತಡೆಹಿಡಿಯುವಂತೆ ಕೋರಿ ಜಾಧವ್, ಪಾಕಿಸ್ತಾನದ  ಸೇನಾ ಮುಖ್ಯಸ್ಥ ಜನರಲ್‌ ಖಮರ್ ಜಾವೇದ್‌ ಬಾಜ್ವಾ ಅವರಿಗೆ ಮನವಿ ಸಲ್ಲಿಸಿದ್ದಾರೆ ಎಂದು  ಹೇಳಿದೆ.

ಜಾಧವ್‌ ಎರಡನೇ ತಪ್ಪೊಪ್ಪಿಗೆ ಹೇಳಿಕೆಯುಳ್ಳ ವಿಡಿಯೊವನ್ನು ಪಾಕ್‌ ಸೇನೆ ಬಿಡುಗಡೆ ಮಾಡಿದೆ.

ಈ ವಿಡಿಯೊದಲ್ಲಿ ಜಾಧವ್‌ ತಾವು ಭಾಗಿಯಾದ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳ  ಬಗ್ಗೆ ವಿವರಣೆ ನೀಡಿದ್ದಾರೆ. ಅದಕ್ಕಾಗಿ ಅವರು ಪಶ್ಚಾತ್ತಾಪ ವ್ಯಕ್ತಪಡಿಸಿದ್ದು ಕ್ಷಮೆಯನ್ನೂ ಯಾಚಿಸಿದ್ದಾರೆ.

ಭಾರತ ನಿರಂತರವಾಗಿ ಪಾಕ್‌ ವಿರುದ್ಧ ನಡೆಸಿರುವ ಕೃತ್ಯಗಳ ಬಗ್ಗೆ ಜಗತ್ತಿಗೆ ಗೊತ್ತಾಗಲಿ ಎಂದು ಈ ವಿಡಿಯೊ ಬಿಡುಗಡೆ ಮಾಡುತ್ತಿರುವುದಾಗಿ ಪಾಕ್‌ ಸೇನಾ ಪ್ರಕಟಣೆ ಹೇಳಿದೆ.

ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ 46 ವರ್ಷದ ಕುಲಭೂಷಣ್ ಜಾಧವ್‌ ಅವರಿಗೆ ಏಪ್ರಿಲ್‌ನಲ್ಲಿ ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ತಡೆ ಹಿಡಿಯುವಂತೆ ಕೋರಿ ಇದಕ್ಕೂ ಮೊದಲು  ಜಾಧವ್‌ ಸಲ್ಲಿಸಿದ್ದ  ಮೇಲ್ಮನವಿಯನ್ನು ಪಾಕಿಸ್ತಾನದ ಸೇನಾ ನ್ಯಾಯಾಲಯಕ್ಕೆ ವಜಾಗೊಳಿಸಿತ್ತು.

ಜಾಧವ್‌ ಅವರು ಕ್ಷಮಾದಾನ ಅರ್ಜಿ ಸಲ್ಲಿಸುವುದಕ್ಕೆ ಪಾಕಿಸ್ತಾನ ಕಾನೂನಿನಲ್ಲಿ ಅವಕಾಶ ಇದೆ.  ಒಂದು ವೇಳೆ ಸೇನಾ ಮುಖ್ಯಸ್ಥರು  ಅರ್ಜಿ ವಜಾಗೊಳಿಸಿದರೆ, ನಂತರ ಪಾಕಿಸ್ತಾನ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕಳೆದ ವರ್ಷ ಮಾರ್ಚ್‌ 3ರಂದು ಇರಾನ್‌ನಿಂದ ಪಾಕಿಸ್ತಾನ ಪ್ರವೇಶಿಸುವ ಯತ್ನದಲ್ಲಿದ್ದ ಜಾಧವ್‌ ಬಲೂಚಿಸ್ತಾನದಲ್ಲಿ ಪಾಕ್‌ ಸೈನಿಕರಿಗೆ ಸೆರೆ ಸಿಕ್ಕಿದ್ದರು ಎಂದು ಪಾಕಿಸ್ತಾನ ಹೇಳಿದೆ.

ಆದರೆ, ಈ ಆರೋಪವನ್ನು ತಳ್ಳಿಹಾಕಿದ್ದ ಭಾರತ, ನಿವೃತ್ತಿಯ ನಂತರ ವ್ಯವಹಾರ ಸಂಬಂಧ ಇರಾನ್‌ನಲ್ಲಿದ್ದ ಜಾಧವ್‌ ಅವರನ್ನು ಅಪಹರಣ ಮಾಡ ಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.