ADVERTISEMENT

ಗಂಟೆಗೆ 350 ಕಿ.ಮೀ. ವೇಗದ ಬುಲೆಟ್‌ ರೈಲು ಸಂಚಾರ ಆರಂಭ

1300 ಕಿ.ಮೀ. ದೂರದ ಬೀಜಿಂಗ್‌–ಶಾಂಘೈ ಪ್ರಯಾಣಕ್ಕೆ 4.5 ಗಂಟೆ

ಏಜೆನ್ಸೀಸ್
Published 21 ಸೆಪ್ಟೆಂಬರ್ 2017, 7:46 IST
Last Updated 21 ಸೆಪ್ಟೆಂಬರ್ 2017, 7:46 IST
ಗಂಟೆಗೆ 350 ಕಿ.ಮೀ. ವೇಗದ ಬುಲೆಟ್‌ ರೈಲು ಸಂಚಾರ ಆರಂಭ
ಗಂಟೆಗೆ 350 ಕಿ.ಮೀ. ವೇಗದ ಬುಲೆಟ್‌ ರೈಲು ಸಂಚಾರ ಆರಂಭ   

ಬೀಜಿಂಗ್‌: ಜಗತ್ತಿನ ಅತಿ ವೇಗದ ಬುಲೆಟ್‌ ರೈಲು ಚೀನಾದಲ್ಲಿ ಗುರುವಾರ ಮತ್ತೆ ಕಾರ್ಯಾರಂಭಿಸಿದ್ದು, ಬೀಜಿಂಗ್‌–ಶಾಂಘೈ ನಡುವೆ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚಾರಿಸುತ್ತದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 9ಕ್ಕೆ ಬೀಜಿಂಗ್‌ ಸೌತ್‌ ರೈಲ್ವೆ ನಿಲ್ದಾಣದಿಂದ ಶಾಂಘೈಗೆ ಪ್ರಯಾಣ ಆರಂಭಿಸಿದ್ದಾಗಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. 1300 ಕಿ.ಮೀ.ಗೂ ಹೆಚ್ಚು ದೂರದ ಈ ಪ್ರಯಾಣವನ್ನು 4 ಗಂಟೆ 28 ನಿಮಿಷಗಳಲ್ಲಿ ವೇಗ ಹೆಚ್ಚಿಸಿಕೊಂಡಿರುವ ಬುಲೆಟ್‌ ರೈಲು ಪೂರೈಸುತ್ತದೆ.

ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌(ಇಎಂಯು) ಎಂದು ಕರೆಯಲಾಗುವ ನೂತನ ಬುಲೆಟ್‌ ರೈಲುಗಳು ಗಂಟೆಗೆ ಗರಿಷ್ಠ 400 ಕಿ.ಮೀ. ವೇಗ ಪಡೆದುಕೊಳ್ಳಬಹುದಾಗಿದೆ. 350 ಕಿ.ಮೀ. ವೇಗದ ಸ್ಥಿರತೆ ಕಾಯ್ದುಕೊಳ್ಳುವ ಫಕ್ಸಿಂಗ್‌ ರೈಲು 30 ವರ್ಷ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಈ ಮಾದರಿ ರೈಲುಗಳು 350 ಕಿ.ಮೀ. ವೇಗದಲ್ಲಿಯೂ ಇತರೆ ವೇಗದ ರೈಲುಗಳಿಗಿಂತ ಶೇ 10ರಷ್ಟು ಕಡಿಮೆ ವಿದ್ಯುತ್‌ ಬಳಸಿಕೊಳ್ಳುತ್ತದೆ.

ADVERTISEMENT

ಚೀನಾದಲ್ಲಿಯೇ ಸಿದ್ಧಪಡಿಸಲಾಗಿರುವ ಫಕ್ಸಿಂಗ್‌ ರೈಲು ಇದೇ ಮೊದಲ ಬಾರಿಗೆ ಸಂಚಾರ ದಟ್ಟಣೆಯ ಮಾರ್ಗದಲ್ಲಿ ಪ್ರಯಾಣ ಆರಂಭಿಸಿದೆ. ಈ ಮಾರ್ಗದಲ್ಲಿ ನಿತ್ಯ  5 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಾರೆ.

ಪ್ರಸ್ತುತ ಚೀನಾದಲ್ಲಿ 20 ಸಾವಿರ ಕಿ.ಮೀ. ಹೈಸ್ಪೀಡ್‌ ರೈಲು ಮಾರ್ಗವಿದೆ. 2020ಕ್ಕೆ ಇನ್ನೂ 10 ಸಾವಿರ ಕಿ.ಮೀ. ಹೈಸ್ಪೀಡ್‌ ಮಾರ್ಗಕ್ಕೆ ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ.

‌2008ರಲ್ಲಿ ಮೊದಲ ಸಂಚಾರ:
2008ರ ಆಗಸ್ಟ್‌ನಲ್ಲಿಯೇ ಪ್ರತಿ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚರಿಸುವ ರೈಲು ಪ್ರಯಾಣ ಪ್ರಾರಂಭಿಸಲಾಗಿತ್ತು. 2011ರಲ್ಲಿ ನಡೆದ ರೈಲುಗಳ ಮುಖಾಮುಖಿ ಡಿಕ್ಕಿಯಲ್ಲಿ 40 ಜನರು ಮೃತಪಟ್ಟು, 190ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆನಂತರ ರೈಲಿನ ವೇಗವನ್ನು ಕಡಿತಗೊಳಿಸಿ ಗಂಟೆಗೆ 250–300 ಕಿ.ಮೀ. ವೇಗದಲ್ಲಿ ಸಂಚಾಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆರು ವರ್ಷಗಳ ನಂತರ ಮತ್ತೆ ರೈಲು 350 ಕಿ.ಮೀ. ವೇಗ ಪಡೆದುಕೊಂಡಿದೆ. ತುರ್ತು ಸಂದರ್ಭದಲ್ಲಿ ತಾನಾಗಿಯೇ ವೇಗ ನಿಯಂತ್ರಿಸಿಕೊಳ್ಳುವ ವ್ಯವಸ್ಥೆಯನ್ನು ನೂತನ ರೈಲುಗಳಲ್ಲಿ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.