ADVERTISEMENT

ಚೀನಾ: ನಾಳೆ ಪ್ರಣವ್‌ ಮಹತ್ವದ ಮಾತುಕತೆ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಚೀನಾದ ಪ್ರವಾಸದ ವೇಳೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳೊಟ್ಟಿಗೆ ಮಾತನಾಡಿದ ನೋಟ -ಪಿಟಿಐ ಚಿತ್ರ
ಚೀನಾದ ಪ್ರವಾಸದ ವೇಳೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳೊಟ್ಟಿಗೆ ಮಾತನಾಡಿದ ನೋಟ -ಪಿಟಿಐ ಚಿತ್ರ   

ಬೀಜಿಂಗ್‌ (ಪಿಟಿಐ): ಭಾರತವು ಪರಮಾಣು ಪೂರೈಕೆದಾರ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವ ಪಡೆಯುವುದಕ್ಕೆ ಚೀನಾದ ವಿರೋಧ ಹಾಗೂ ಅಂತರರಾಷ್ಟ್ರೀಯ ಭಯೋತ್ಪಾದಕ ಮಸೂದ್‌ ಅಜರ್‌ಗೆ ನಿಷೇಧ ಹೇರುವ ವಿಶ್ವಸಂಸ್ಥೆಯ ನಡೆಗೆ ತಡೆಯೊಡ್ಡಿರುವ ವಿಷಯಗಳನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ತಮ್ಮ ಚೀನಾ ಪ್ರವಾಸದ ವೇಳೆ ಪ್ರಮುಖವಾಗಿ ಚರ್ಚಿಸಲಿದ್ದಾರೆ.

ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಅವರು ಚೀನಾದ ದಕ್ಷಿಣ ಭಾಗದ ಗುವಾಂಗ್‌ಜೋವ್‌ ನಗರದಲ್ಲಿ ಮಂಗಳವಾರ ಬಂದಿಳಿದರು.

ಅಧ್ಯಕ್ಷ ಜಿನ್‌ಪಿಂಗ್‌ ಅವರೊಂದಿಗೆ ಗುರುವಾರ ಮುಖಾಮುಖಿ ಮಾತುಕತೆ ನಡೆಸಲಿರುವ ಪ್ರಣವ್‌, ಪ್ರತಿನಿಧಿ ಮಟ್ಟದ ಮಾತುಕತೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಲೀ ಕಿಖಿಯಾಂಗ್‌ ಮತ್ತು ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಝಾಂಗ್‌ ದೆಜಿಯಾಂಗ್‌ ಅವರನ್ನೂ ಭೇಟಿಯಾಗಲಿದ್ದಾರೆ.

ಜಿನ್‌ಪಿಂಗ್‌ ಜತೆಗಿನ ಮಾತುಕತೆ ವೇಳೆ ಗಡಿ ಬಿಕ್ಕಟ್ಟು ಮತ್ತು ಪರಿಹಾರೋಪಾಯಗಳ ಕುರಿತೂ ಪ್ರಸ್ತಾಪಿಸಲಿದ್ದಾರೆ.

ಎನ್‌ಎಸ್‌ಜಿ ಸೇರ್ಪಡೆ ಸಂಬಂಧ ಭಾರತದ ನಿಲುವನ್ನು ಅವರು ಚೀನಾಕ್ಕೆ ಸ್ಪಷ್ಟಪಡಿಸಲಿದ್ದು, ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ 48 ಸದಸ್ಯರನ್ನೊಳಗೊಂಡ ಎನ್‌ಎಸ್‌ಜಿ ಸಭೆಯ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.

ಅಲ್ಲದೆ, ಮಸೂದ್‌ ಅಜರ್‌ಗೆ ನಿಷೇಧ ಹೇರುವುದನ್ನು ತಡೆದಿರುವ ಚೀನಾದ ನಿಲುವಿನ ಬಗ್ಗೆ ಭಾರತದ ಕಳವಳವನ್ನೂ ಪ್ರಣವ್‌ ಅವರು ವ್ಯಕ್ತಪಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.