ADVERTISEMENT

ಜಂಟಿ ನೌಕಾ ಗಸ್ತು ಇಲ್ಲ: ಅಮೆರಿಕ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ವಾಷಿಂಗ್ಟನ್‌ (ಪಿಟಿಐ): ಹಿಂದೂ ಮಹಾಸಾಗರ ಅಥವಾ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತದೊಂದಿಗೆ ಜಂಟಿ ನೌಕಾ ಗಸ್ತು ಕೈಗೊಳ್ಳುವ ಯೋಜನೆ ಇಲ್ಲ ಎಂದು ಅಮೆರಿಕ ಗುರುವಾರ ಸ್ಪಷ್ಟಪಡಿಸಿದೆ.

‘ಏಷ್ಯಾದಲ್ಲಿ ಶಾಂತಿ, ಸದೃಢತೆ ಮತ್ತು ಅಭಿವೃದ್ಧಿ ನೆಲೆಸುವಂತೆ ಮಾಡಲು ದೂರದೃಷ್ಟಿಯ ಆಲೋಚನೆಗಳನ್ನು  ಅಮೆರಿಕ ಮತ್ತು ಭಾರತ ಹಂಚಿಕೊಳ್ಳುತ್ತವೆ. ಆದರೆ ಜಂಟಿ ನೌಕಾ ಗಸ್ತು ನಡೆಸುವ ಯಾವುದೇ ಅಲೋಚನೆ ಇಲ್ಲ’ ವಿದೇಶಾಂಗ ಇಲಾಖೆ ಉಪ ವಕ್ತಾರ ಮಾರ್ಕ್‌ ಟೋನರ್‌  ಹೇಳಿದರು.

‘ಹಿಂದೂ ಮಹಾಸಾಗರದಲ್ಲಿಯೂ ನೌಕಾಗಸ್ತು ಕೈಗೊಳ್ಳುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ಏಷ್ಯಾದ ಇತರ ದೇಶಗಳಾದ ವಿಯೆಟ್ನಾಂ, ಫಿಲಿಪ್ಪೀನ್ಸ್‌, ಮಲೇಷ್ಯಾ ಮತ್ತು ಬ್ರೂನಿಯಲ್ಲಿಯೂ ತನ್ನ ಆಧಿಪತ್ಯ ಸ್ಥಾಪಿಸಿ ಇಡೀ ದಕ್ಷಿಣ ಚೀನಾ ಸಮುದ್ರ ತನ್ನದು ಎಂದು ಚೀನಾ ಹೇಳಿಕೊಳ್ಳುತ್ತಿದೆ. ಈ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡು ಅಲ್ಲಿ ಕೃತಕ ದ್ವೀಪ ನಿರ್ಮಿಸಿ ಅದನ್ನು ತನ್ನ ಸೇನೆಗಾಗಿ ಬಳಸಿಕೊಳ್ಳುತ್ತಿದೆ ಎಂದು ಈ ರಾಷ್ಟ್ರಗಳು ಆರೋಪಿಸಿವೆ ಎಂದು ಟೋನರ್‌ ವಿವರಿಸಿದರು.

‘ಮುಂಬೈ ದಾಳಿ ತನಿಖೆಗೆ ಸಹಕಾರ ಮುಂದುವರಿಕೆ’
2008ರ ಮುಂಬೈ ದಾಳಿಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಭಾರತದ ಜೊತೆ ಶ್ರಮಿಸುತ್ತಿರುವುದಾಗಿ ಅಮೆರಿಕ ಹೇಳಿದೆ.

ಪಾಕಿಸ್ತಾನ ಮೂಲಕ ಅಮೆರಿಕದ ಉಗ್ರ ಡೇವಿಡ್ ಹೆಡ್ಲಿ 26/11 ದಾಳಿಗೆ ಸಂಬಂಧಿಸಿದಂತೆ ಮುಂಬೈ ಕೋರ್ಟ್‌ ಎದುರು ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಿರುವ ಹೊತ್ತಿನಲ್ಲೇ ವಿದೇಶಾಂಗ ಇಲಾಖೆಯ ಉಪವಕ್ತಾರ ಮಾರ್ಕ್ ಟೋನರ್ ಈ ಮಾತು ಹೇಳಿದ್ದಾರೆ.

‘ಮುಂಬೈ ದಾಳಿಯ ತನಿಖೆಗೆ ಸಂಬಂಧಿಸಿದ ಅಮೆರಿಕ ಹಲವು ವರ್ಷಗಳಿಂದಲೂ ಭಾರತ ಸರ್ಕಾರದ ಜತೆ ಸಹಕರಿಸುತ್ತಿದೆ. ಲಷ್ಕರ್‌ ಎ  ತಯಬಾ ಉಗ್ರ ಹೆಡ್ಲಿಯು ವಿಡಿಯೋ ವಿಚಾರಣೆ ಮೂಲಕ ಮುಂಬೈ ಕೋರ್ಟ್‌ಗೆ ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಿದ್ದಾನೆ. ದಾಳಿಯಿಂದ ಸಂತ್ರಸ್ತರಾದವರಲ್ಲಿ ಭಾರತ, ಅಮೆರಿಕವಷ್ಟೇ ಅಲ್ಲದೆ ಇತರ ದೇಶಗಳ ನಾಗರಿಕರೂ ಸೇರಿದ್ದಾರೆ’ ಎಂದಿದ್ದಾರೆ.

ಅಮೆರಿಕವು ಈ ವಿಚಾರದಲ್ಲಿ ಭಾರತದ ಜತೆ ಕೆಲಸ ಮಾಡಿದಂತೆ ಭಾರತ ಹಾಗೂ ಪಾಕಿಸ್ತಾನಗಳು ಇದೇ ವಿಷಯದಲ್ಲಿ ಜಂಟಿ ಸಹಯೋಗದಲ್ಲಿ ಕೆಲಸ ಮಾಡಬೇಕು ಎಂದೂ ಅಮೆರಿಕ ಪ್ರೋತ್ಸಾಹಿಸುತ್ತದೆ ಎಂದಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.