ADVERTISEMENT

ಜಗತ್ತಿನ ಅತಿ ಉದ್ದದ ರೈಲ್ವೆ ಸುರಂಗ ಸಿದ್ಧ

​ಪ್ರಜಾವಾಣಿ ವಾರ್ತೆ
Published 30 ಮೇ 2016, 0:12 IST
Last Updated 30 ಮೇ 2016, 0:12 IST
ಅಲ್ಫ್‌ ಪರ್ವತದಡಿ ಸಾಗಿರುವ ಸುರಂಗ ಮಾರ್ಗದ ಆಕರ್ಷಕ ನೋಟ
ಅಲ್ಫ್‌ ಪರ್ವತದಡಿ ಸಾಗಿರುವ ಸುರಂಗ ಮಾರ್ಗದ ಆಕರ್ಷಕ ನೋಟ   

ಜಿನೀವಾ (ಎಎಫ್‌ಪಿ): ಸ್ವಿಟ್ಜರ್ಲೆಂಡ್ ಎಂಜಿನಿಯರ್ ಕಾರ್ಲ್ ಎಡ್ವರ್ಡ್ ಗ್ರೂನರ್‌ ಅವರ ಕನಸಿನ ಕೂಸಾದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ.

ಅಲ್ಫ್‌ ಪರ್ವತದಡಿ ಸಾಗುವ ಈ ಮಾರ್ಗದ ಯೋಜನೆ 21ನೇ ಶತಮಾನದ ಅಂತ್ಯದ ಹೊತ್ತಿಗೆ ಆರಂಭವಾಗಲಿದೆ ಎಂದು  ಅವರು 1967ರಲ್ಲಿ ಭವಿಷ್ಯ ನುಡಿದಿದ್ದರು. 2000ನೇ ಇಸ್ವಿಯಲ್ಲಿ ಆರಂಭವಾದ ಗೊಟ್‌ಹಾರ್ಡ್ ಬೇಸ್ ಟನೆಲ್ (ಜಿಬಿಟಿ) ಕಾಮಗಾರಿ ಮುಗಿದಿದ್ದು, ಮುಂದಿನವಾರ ಉದ್ಘಾಟನೆಗೊಳ್ಳಲಿದೆ.

ಯುರೋಪ್‌ನ ಹೃದಯ ಭಾಗದ ಸಂಚಾರದಲ್ಲಿ ಪರಿವರ್ತನೆ ತರಲಿರುವ ಈ ಮಾರ್ಗವು ಡಿಸೆಂಬರ್ ಹೊತ್ತಿಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. 57 ಕಿ.ಮೀಟರ್ ಉದ್ದದ (35 ಮೈಲು) ಈ ಮಾರ್ಗ ನಿರ್ಮಾಣಕ್ಕೆ 12 ಬಿಲಿಯನ್ ಡಾಲರ್ (ಸುಮಾರು ₹81,600 ಕೋಟಿ) ವ್ಯಯಿಸಲಾಗಿದೆ. 2400 ಕಾರ್ಮಿಕರು ಇದಕ್ಕಾಗಿ
ಶ್ರಮಪಟ್ಟಿದ್ದಾರೆ ಎಂದು ಸ್ವಿಸ್ ಸರ್ಕಾರ ಹೇಳಿದೆ.

ಪರ್ವತದಲ್ಲಿ ಸುರಂಗ ಮಾರ್ಗ ನಿರ್ಮಾಣದಲ್ಲಿ 2.8 ಕೋಟಿ ಟನ್‌ ತೂಕದಷ್ಟು ಕಲ್ಲುಬಂಡೆಗಳನ್ನು ಅಗೆಯಲಾಗಿದೆ. ಅಧಿಕಾರಿಗಳ ವಿಳಂಬ ಧೋರಣೆ ಹಾಗೂ ಹಣಕಾಸಿನ ಅಲಭ್ಯತೆಯಿಂದಾಗಿ ಯೋಜನೆಯ ಕಾಮಗಾರಿ ವಿಳಂಬವಾಗಿದೆ.

ಸ್ವಿಟ್ಜರ್ಲೆಂಡ್‌ನ ಎರ್ಸ್‌ಫೆಲ್ಡ್ ನಿಂದ ಬೊಡಿಯೊ ಮಧ್ಯೆ ಈ ಸುರಂಗ ಸಂಪರ್ಕ ಕಲ್ಪಿಸುತ್ತದೆ. ಸ್ವಿಸ್‌ನ ಜ್ಯೂರಿಚ್‌ನಿಂದ ಇಟಲಿಯ ಮಿಲಾನ್‌ ನಡುವೆ  ರೈಲ್ವೆ ಪ್ರಯಾಣಕ್ಕೆ ಪ್ರಸ್ತುತ 3 ಗಂಟೆ 40 ನಿಮಿಷ ಬೇಕಾಗುತ್ತದೆ. ಇನ್ನು ಒಂದು ಗಂಟೆ ಕಡಿಮೆ ಅವಧಿಯಲ್ಲಿ ಪ್ರಯಾಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.