ADVERTISEMENT

ಜಾಧವ್‌ಗೆ ರಾಜತಾಂತ್ರಿಕ ನೆರವು ನೀಡುವಂತೆ ಆದೇಶಿಸುವ ಅಧಿಕಾರ ಐಸಿಜೆಗಿಲ್ಲ: ಸರ್ತಾಜ್ ಅಜೀಜ್

ಏಜೆನ್ಸೀಸ್
Published 20 ಮೇ 2017, 13:41 IST
Last Updated 20 ಮೇ 2017, 13:41 IST
ಸರ್ತಾಜ್ ಅಜೀಜ್
ಸರ್ತಾಜ್ ಅಜೀಜ್   

ಇಸ್ಲಾಮಾಬಾದ್‌: ‘ಕುಲಭೂಷಣ್‌ ಜಾಧವ್‌ ಅವರಿಗೆ ರಾಜತಾಂತ್ರಿಕ ನೆರವು ನೀಡುವಂತೆ ಆದೇಶಿಸುವ ಅಧಿಕಾರ ಅಂತರರಾಷ್ಟ್ರೀಯ ನ್ಯಾಯಾಲಯಕ್ಕಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ವಿಚಾರದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿಗಳ ಸಲಹೆಗಾರರಾಗಿರುವ ಸರ್ತಾಜ್ ಅಜೀಜ್ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಜೀಜ್‌, ‘ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಐಸಿಜೆ ಪಾಕಿಸ್ತಾನಕ್ಕೆ ತಿಳಿಸಿದೆಯಷ್ಟೆ. ಪಾಕಿಸ್ತಾನದ ಕಾನೂನಿನ ಪ್ರಕಾರ ನೀಡಲಾಗಿರುವ ಶಿಕ್ಷೆಯನ್ನು ರದ್ದುಗೊಳಿಸುವ ಅಧಿಕಾರವಾಗಲೀ, ಜಾಧವ್‌ ಅವರಿಗೆ ರಾಜತಾಂತ್ರಿಕ ನೆರವು ನೀಡುವಂತೆ ಆದೇಶ ನೀಡುವ ಅಧಿಕಾರವಾಗಲೀ ಐಸಿಜೆಗೆ ಇಲ್ಲ’ ಎಂದಿದ್ದಾರೆ.

‘ಐಸಿಜೆ ಮುಂದೆ ಗಲ್ಲು ಶಿಕ್ಷೆಯ ಪ್ರಕರಣಗಳು ಬಂದಾಗಲೆಲ್ಲಾ ಅದು ತಡೆಯಾಜ್ಞೆ ನೀಡುವುದು ಮಾಮೂಲು. ಜಾಧವ್‌ ರಾಜತಾಂತ್ರಿಕ ನೆರವು ಪಡೆಯಲು ಅವಕಾಶ ನೀಡಬೇಕೆಂಬ ಬಗ್ಗೆ ಐಸಿಜೆ ಆದೇಶ ನೀಡಿಲ್ಲ. ಈ ವಿಷಯ ಐಸಿಜೆಯಲ್ಲಿ ಚರ್ಚೆಗೆ ಬರಲಿದೆ ಎಂದು ಸೂಚನೆ ನೀಡಿದೆಯಷ್ಟೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಜಾಧವ್‌ ಸಾಮಾನ್ಯ ಭಾರತೀಯ ಪ್ರಜೆಯಲ್ಲ. ಅವರು ಭಾರತೀಯ ಸೇನೆಯ ಅಧಿಕಾರಿ. ಪಾಕಿಸ್ತಾನದ ವಿರುದ್ಧ ಸಂಚು ರೂಪಿಸಿರುವ ವಿಷಯವನ್ನು ಅವರೇ ಒಪ್ಪಿಕೊಂಡಿದ್ದಾರೆ. ನಕಲಿ ಪಾಸ್‌ಪೋರ್ಟ್‌ ಬಳಸಿಕೊಂಡು ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಗಿ ಜಾಧವ್‌ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಅಜೀಜ್‌ ಹೇಳಿದ್ದಾರೆ.

‘ಐಸಿಜೆಯ ಮುಂದಿನ ವಿಚಾರಣೆಗೆ ಪಾಕಿಸ್ತಾನವು ಅತ್ಯಂತ ಸಮರ್ಥ ಕಾನೂನು ತಂಡದೊಂದಿಗೆ ಹಾಜರಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ವಿಯೆನ್ನಾ ಒಪ್ಪಂದದ ಪ್ರಕಾರ ಜಾಧವ್‌ ಅವರಿಗೆ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿಯ ಮೂಲಕ ರಾಜತಾಂತ್ರಿಕ ನೆರವು ಪಡೆಯಲು ಅವಕಾಶ ನೀಡಬೇಕಿತ್ತು ಎಂದು ಐಸಿಜೆಯಲ್ಲಿ ಭಾರತ ವಾದಿಸಿತ್ತು. ಈ ವಾದವನ್ನು ಐಸಿಜೆ ಮೇ 19ರ ಆದೇಶದಲ್ಲಿ ಎತ್ತಿ ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.