ADVERTISEMENT

ಜಿಂದಾಲ್ ಭೇಟಿ ಪಾಕ್ ಮೌನ

ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ನವಾಜ್ ಷರೀಫ್, ಸಜ್ಜನ್ ಜಿಂದಾಲ್
ನವಾಜ್ ಷರೀಫ್, ಸಜ್ಜನ್ ಜಿಂದಾಲ್   

ಇಸ್ಲಾಮಾಬಾದ್: ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಭಾರತದ ಉಕ್ಕು ಉದ್ಯಮಿ ಸಜ್ಜನ್ ಜಿಂದಾಲ್ ಬುಧವಾರ ಭೇಟಿಯಾದ ಉದ್ದೇಶದ ಬಗ್ಗೆ ಪ್ರತಿಕ್ರಿಯೆ ನೀಡಬೇಕಾದ ಪಾಕ್ ವಿದೇಶಾಂಗ ಇಲಾಖೆ ಮೌನ ವಹಿಸಿದೆ. ಇದೊಂದು ರಹಸ್ಯ ಭೇಟಿ ಎಂದು ಪ್ರತಿಪಕ್ಷ ಆರೋಪಿಸಿತ್ತು.

ಇಸ್ಲಾಮಾಬಾದ್‌ನಿಂದ 45 ಕಿ.ಮೀ ದೂರದ ಮರಿಯಲ್ಲಿರುವ ಷರೀಫ್‌ ಅವರ ಖಾಸಗಿ ನಿವಾಸಕ್ಕೆ ಜಿಂದಾಲ್ ಭೇಟಿ ನೀಡಿದ್ದರು. ಇದು ಹಲವು ಊಹಾಪೋಹಗಳಿಗೆ ಗ್ರಾಸವಾಗಿದೆ.

ದೇವಸ್ಥಾನ ಧ್ವಂಸ
ಕರಾಚಿ:
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ.ಥಟ್ಟಾ ಜಿಲ್ಲೆಯ ಘಾರೊ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ದೇವರ ಮೂರ್ತಿಗಳ ಮುರಿದ ಚೂರುಗಳು ಸಮೀಪದ ಚರಂಡಿ ಬಳಿ ಪತ್ತೆಯಾಗಿವೆ.

ಬೆಳಿಗ್ಗೆ ಭಕ್ತರು ಪೂಜೆಗೆ ಬಂದಾಗ ಮೂರ್ತಿ ಭಗ್ನಗೊಂಡಿರುವುದು ಕಂಡು ಬಂದಿದೆ. ಮೂವರು ಅಪರಿಚಿತರ ವಿರುದ್ಧ ಧರ್ಮನಿಂದನೆ ಹಾಗೂ ಭಯೋತ್ಪಾದನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಇರುವ ಹೆಜ್ಜೆ ಗುರುತಿನ ಪ್ರಕಾರ 12 ವರ್ಷದ ಹುಡುಗ ಈ ಕೆಲಸ ಮಾಡಿರುವ ಸಂಭವವಿದೆ’ ಎಂದು  ಪೊಲೀಸರು ಹೇಳಿದ್ದಾರೆ.

ಕ್ಷಿಪಣಿ ಪರೀಕ್ಷೆ ವಿಫಲ
ವಾಷಿಂಗ್ಟನ್:
ಉತ್ತರ ಕೊರಿಯಾ ಉಡಾವಣೆ ಮಾಡಿದ ಖಂಡಾಂತರ ಕ್ಷಿಪಣಿಯು ವಿಫಲವಾಗಿದೆ. ವಿರೋಧದ ನಡುವೆಯೂ ಉತ್ತರ ಕೊರಿಯಾವು ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದು ಅಮೆರಿಕ ಹೇಳಿದೆ.

‘ಶುಕ್ರವಾರ ಬೆಳಿಗ್ಗೆ 10.33ಕ್ಕೆ ಉತ್ತರ ಕೊರಿಯಾದ ಪುಕ್ಚಂಗ್ ಸಮೀಪದಿಂದ ಉಡಾವಣೆಗೊಂಡ ಖಂಡಾಂತರ ಕ್ಷಿಪಣಿಯನ್ನು ಅಮೆರಿಕ ಫೆಸಿಫಿಕ್ ಕಮಾಂಡ್ ಪತ್ತೆಹಚ್ಚಿತು’ ಎಂದು ಅದರ ವಕ್ತಾರ ಡೇವ್ ಬೆನ್ಹಮ್ ಹೇಳಿದ್ದಾರೆ. 

ಕ್ಷಿಪಣಿ ಉಡಾವಣೆಗೊಂಡರೂ, ಕೊರಿಯಾದ ಭೂಪ್ರದೇಶವನ್ನು ದಾಟಿ, ನಿಗದಿತ ಗುರಿ ತಲುಪಲು ವಿಫಲವಾಯಿತು ಎಂದಿದ್ದಾರೆ. ಉತ್ತರ ಕೊರಿಯಾದ ಪ್ರಚೋದನಕಾರಿ ಪ್ರವೃತ್ತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ.

ಕ್ಷಿಪಣಿ ಉಡಾವಣೆ ಮೂಲಕ ಚೀನಾ ಹಾಗೂ ಅದರ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಾತಿಗೂ ಉತ್ತರ ಕೊರಿಯಾ ಬೆಲೆ ಕೊಡದೆ ಅಗೌರವ ತೋರಿದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT