ADVERTISEMENT

‘ಜೇಮ್ಸ್ ಬಾಂಡ್’ ಖ್ಯಾತಿಯ ನಟ ರೋಜರ್ ಮೂರ್ ನಿಧನ

ಪಿಟಿಐ
Published 23 ಮೇ 2017, 19:30 IST
Last Updated 23 ಮೇ 2017, 19:30 IST
‘ಜೇಮ್ಸ್ ಬಾಂಡ್’ ಖ್ಯಾತಿಯ ನಟ ರೋಜರ್ ಮೂರ್ ನಿಧನ
‘ಜೇಮ್ಸ್ ಬಾಂಡ್’ ಖ್ಯಾತಿಯ ನಟ ರೋಜರ್ ಮೂರ್ ನಿಧನ   

ಲಂಡನ್ : ಜೇಮ್ಸ್ ಬಾಂಡ್ ಪಾತ್ರಗಳ ಖ್ಯಾತಿಯ ಬ್ರಿಟಿಷ್ ನಟ ರೋಜರ್ ಮೂರ್ (89) ಮಂಗಳವಾರ ನಿಧನರಾದರು. ಸ್ವಿಟ್ಜರ್ಲೆಂಡ್‌ನಲ್ಲಿ ವಾಸವಾಗಿದ್ದ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.

‘ನಮ್ಮ ತಂದೆ ಸರ್ ರೋಜರ್ ಮೂರ್ ಮಂಗಳವಾರ ನಿಧನರಾಗಿದ್ದಾರೆ. ಈ ಹೃದಯ ವಿದ್ರಾವಕ ವಿಚಾರವನ್ನು ಭಾರ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ’ ಎಂದು ರೋಜರ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ. ‘ಕೊನೆಯ ದಿನಗಳಲ್ಲಿ ಅವರ ಸುತ್ತ ಇದ್ದವರು ತೋರಿದ ಪ್ರೀತಿಯನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ’ ಎಂದು ಟ್ವೀಟ್‌ ವಿವರಿಸಿದೆ.

ಮೂರೆ ಲಂಡನ್‌ನ ಸ್ಟಾಕ್‌ವೆಲ್‌ನಲ್ಲಿ 1927 ರ ಅಕ್ಟೋಬರ್‌ 14 ರಂದು ಜನಿಸಿದ್ದರು. ‘ಲಿವ್ ಆ್ಯಂಡ್ ಲೆಟ್ ಡೈ’, ‘ದ ಸ್ಪೈ ವ್ಹೂ ಲವ್ಡ್ ಮಿ’, ‘ಫಾರ್ ಯುವರ್ ಐಸ್ ಓನ್ಲಿ’, ‘ಮೂನ್‌ರ್‍ಯಾಕರ್’, ‘ದ ಮ್ಯಾನ್ ವಿಥ್ ದ ಗೋಲ್ಡನ್ ಗನ್’, ‘ಆಕ್ಟೋಪಸ್ಸಿ’, ‘ಎ ವ್ಯೂವ್ ಟು ಎ ಕಿಲ್’ ಚಿತ್ರಗಳ ಬಾಂಡ್ ಪಾತ್ರಗಳ ಮೂಲಕ ರೋಜರ್ ಜನಪ್ರಿಯರಾಗಿದ್ದರು.1973ರಿಂದ 1985ರ ನಡುವೆ ಏಳು ಪತ್ತೇದಾರಿ ಚಿತ್ರಗಳಲ್ಲಿ ನಟಿಸಿದ ಏಕೈಕ ನಟ ಎಂಬ ಹೆಗ್ಗಳಿಕೆ ಅವರದ್ದು. 

ADVERTISEMENT

ಎರಡು ಪುಸ್ತಕ: ನಟನೆಯಲ್ಲದೆ ಮೂರೆ ಅವರು ಲೇಖಕರಾಗಿಯೂ ಗುರುತಿಸಿಕೊಂಡಿದ್ದರು. ತಾವು ಬಾಂಡ್‌ ಆದ ಬಗ್ಗೆ ಒಂದು ಪುಸ್ತಕ ರಚಿಸಿದ್ದರು. ‘ಮೈ ವರ್ಡ್‌ ಈಸ್ ಮೈ ಬಾಂಡ್‌’ ಇವರ ಆತ್ಮಕಥೆ.

ವಿಶ್ವದಾದ್ಯಂತ ಕಂಬನಿ: ಮೂರೆ ನಿಧನಕ್ಕೆ ವಿಶ್ವದಾದ್ಯಂತ ನಟರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ‘ತನ್ನನ್ನು ತಾನು ಪ್ರೀತಿಸುವ ನಟ’ ಎಂದು ಆಸ್ಕರ್ ವಿಜೇತ ನಟ ರಸೆಲ್‌ ಕ್ರುವೆ ಟ್ವೀಟ್‌ ಮಾಡಿದ್ದಾರೆ. ಬಾಲಿವುಡ್ ನಟರಾದ ರಿಷಿ ಕಪೂರ್, ಬೊಮನ್‌ ಇರಾನಿ ಕಂಬನಿ ಮಿಡಿದಿದ್ದಾರೆ.

ಭಾರತದೊಂದಿಗೆ ರೋಜರ್ ನಂಟು
ನವದೆಹಲಿ: ರೋಜರ್‌ ಭಾರತಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. 1982 ರಲ್ಲಿ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಬಂದಿದ್ದರು.  2005ರಲ್ಲಿ ಯುನಿಸೆಫ್‌ನ ಸೌಹಾರ್ದ ರಾಯಭಾರಿಯಾಗಿ  ಐಯೋಡಿನ್‌ಯುಕ್ತ ಉಪ್ಪಿನ ಬಳಕೆ ಬಗ್ಗೆ  ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು. ‘ನೀವು ಇಷ್ಟು ಸುಂದರವಾಗಿ ಕಾಣುವ ರಹಸ್ಯವೇನು’ ಎಂಬ ಪತ್ರಕರ್ತರ ಪ್ರಶ್ನೆಗೆ ‘ಐಯೋಡಿನ್‌ಯುಕ್ತ ಉಪ್ಪು’ ಎಂದು ರೋಜರ್‌ ಉತ್ತರಿಸಿದ್ದರು.  ರಾಜಸ್ತಾನ ಮತ್ತು ದೆಹಲಿಯಲ್ಲಿ ನಡೆದ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರ ಅಭಿನಯದ ‘ಅಕ್ಟೋಪಸಿ’ ಚಿತ್ರವನ್ನು ರಾಜಸ್ತಾನದ ಉದಯ ಪುರದಲ್ಲಿ ಚಿತ್ರೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.