ADVERTISEMENT

ಟೆಕಿ ಶ್ರೀನಿವಾಸ ಹತ್ಯೆ ಖಂಡಿಸಿ ಮೆರವಣಿಗೆ

ಪಿಟಿಐ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಕನ್ಸಾಸ್‌ನಲ್ಲಿ ನಡೆದ ಜಾಥಾದಲ್ಲಿ ಫಲಕ ಹಿಡಿದು ಸಾಗಿದ ವ್ಯಕ್ತಿ –ಎಎಫ್‌ಪಿ ಚಿತ್ರ
ಕನ್ಸಾಸ್‌ನಲ್ಲಿ ನಡೆದ ಜಾಥಾದಲ್ಲಿ ಫಲಕ ಹಿಡಿದು ಸಾಗಿದ ವ್ಯಕ್ತಿ –ಎಎಫ್‌ಪಿ ಚಿತ್ರ   
ಹ್ಯೂಸ್ಟನ್‌ (ಪಿಟಿಐ): ಮಾಜಿ ಸೈನಿಕನೊಬ್ಬನಿಂದ ಹತ್ಯೆಯಾದ ಹೈದರಾಬಾದ್‌ನ ಎಂಜಿನಿಯರ್ ಶ್ರೀನಿವಾಸ ಕೂಚಿಭೊಟ್ಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು  ಕನ್ಸಾಸ್ ನಗರದಲ್ಲಿ  ನಡೆದ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

ನಗರದ ಹಿಂದೂ ದೇವಾಲಯಗಳು ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಹಿಂದೂ, ಕ್ರೈಸ್ತರು, ಯಹೂದಿಗಳು ಮತ್ತು ಸಿಖ್‌ ಸಮುದಾಯದವರು ಭಾಗವಹಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

‘ನಾವು ಶಾಂತಿ ಬಯಸುತ್ತೇವೆ’,‘ಶಾಂತಿಯನ್ನು ಪ್ರೀತಿಸುತ್ತೇವೆ’, ‘ನಮ್ಮ ಮಕ್ಕಳು ನಮ್ಮನ್ನು ಬಿಟ್ಟುಹೋಗುವಂತೆ ಮಾಡಬೇಡಿ, ‘ಒಗ್ಗಟ್ಟು ಸಮುದಾಯದ ಒಂದು ಭಾಗ, ಒಗ್ಗಟ್ಟಾಗಿದ್ದರೆ ಗೆಲ್ಲುತ್ತೇವೆ, ಪತ್ಯೇಕಗೊಂಡರೆ ಸೋಲುತ್ತೇವೆ’ ಮುಂತಾದ ಘೋಷಣೆಗಳನ್ನು ಬರೆದ ಫಲಕಗಳನ್ನು ಹಿಡಿದು ಜನರು ಜಾಥಾ ನಡೆಸಿದರು.

ಶ್ರೀನಿವಾಸ ಮತ್ತು ಘಟನೆಯಲ್ಲಿ ಗಾಯಗೊಂಡ ಅಲೋಕ್‌ ಮೇಡಸಾನಿ ಅವರ ಗೆಳೆಯರು ಶಾಂತಿಗಾಗಿ ನಡೆದ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಗುಂಡಿನ ದಾಳಿಯಲ್ಲಿ ಗಾಯಗೊಂಡ ಅಮೆರಿಕ ಪ್ರಜೆ ಇಯಾನ್ ಗ್ರಿಲ್ಲಟ್ ಅವರ ಸಹೋದರಿಯರು, ಕನ್ಸಾಸ್‌ನ ಲೆಫ್ಟಿನೆಂಟ್‌ ಗೌರ್ನರ್‌ ಜೆಫ್‌ ಕೊಯ್ಲರ್‌,  ಕಾಂಗ್ರೆಸ್‌ ಸಂಸದ ಕೆವಿನ್‌ ಯೊಡರ್‌ ಮತ್ತು ಅಧಿಕಾರಿಗಳು ಹಾಜರಿದ್ದರು.
 
ಹೈದರಾಬಾದ್‌ಗೆ ಪಾರ್ಥಿವ ಶರೀರ 
ಹೈದರಾಬಾದ್‌: ಶ್ರೀನಿವಾಸ ಕೂಚಿಭೊಟ್ಲ ಅವರ ಪಾರ್ಥಿವ ಶರೀರನ್ನು ಏರ್‌ ಇಂಡಿಯಾ ವಿಮಾನದ ಮೂಲಕ ಸೋಮವಾರ ಹೈದರಾಬಾದ್‌ಗೆ ತರಲಾಯಿತು. ಮೃತದೇಹ ತಂದ ವಿಮಾನದಲ್ಲೇ ಶ್ರೀನಿವಾಸ ಅವರ ಪತ್ನಿ ಸುನಯನಾ ದುಮಾಲ, ಸಹೋದರ ಸಾಯಿಕಿಶೋರ್‌  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.