ADVERTISEMENT

ಟ್ರಂಪ್ ಆಡಳಿತ ಭಾರತವನ್ನು ಕಡೆಗಣಿಸಿಲ್ಲ: ಶ್ವೇತಭವನ

ಪಿಟಿಐ
Published 24 ಜೂನ್ 2017, 19:38 IST
Last Updated 24 ಜೂನ್ 2017, 19:38 IST
ಕೃಪೆ:  www.whitehouse.gov
ಕೃಪೆ: www.whitehouse.gov   

ವಾಷಿಂಗ್ಟನ್‌: ‘ಡೋನಾಲ್ಡ್‌ ಟ್ರಂಪ್‌ ಆಡಳಿತ ಯಾವುದೇ ಕಾರಣಕ್ಕೂ ಭಾರತವನ್ನು ಕಡೆಗಣಿಸಿಲ್ಲ’ ಎಂದು ಅಮೆರಿಕ ಶನಿವಾರ ಸ್ಪಷ್ಟಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸದ ಮುನ್ನ  ಈ ಸ್ಪಷ್ಟನೆ ಹೊರಬಿದ್ದಿದೆ.

‘ಟ್ರಂಪ್‌ ಆಡಳಿತ ಭಾರತವನ್ನು ಕಡೆಗಣಿಸಿದೆ ಇಲ್ಲವೇ ಭಾರತಕ್ಕೆ ಆದ್ಯತೆ ನೀಡುತ್ತಿಲ್ಲ  ಎಂಬುವುದು ಶುದ್ಧ ಸುಳ್ಳು’   ಶ್ವೇತಭವನ ಸ್ಪಷ್ಟಪಡಿಸಿದೆ.
ಡೋನಾಲ್ಡ್‌ ಟ್ರಂಪ್‌   ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಮೋದಿ ಸೋಮವಾರ ಶ್ವೇತಭವನದಲ್ಲಿ ಟ್ರಂಪ್‌ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ಚೀನಾಕ್ಕೆ ಮಹತ್ವ ನೀಡುತ್ತಿರುವ ಟ್ರಂಪ್‌ ಆಡಳಿತ ಭಾರತವನ್ನು ಕಡೆಗಣಿಸುತ್ತಿದೆ ಎಂಬ ವಾದವನ್ನು ತಳ್ಳಿ ಹಾಕಿದ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು, ಅಮೆರಿಕಕ್ಕೆ ಭಾರತದ  ಬಾಂಧವ್ಯ ಅತ್ಯಂತ ಮಹತ್ವದ್ದಾಗಿದೆ  ಎಂದರು.
ಟ್ರಂಪ್‌ ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಾಗಿದ್ದು,  ಈಗಾಗಲೇ ಮೋದಿ ಅವರೊಂದಿಗೆ ಎರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ  ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯಾನ್ ಸ್ಪೈಸರ್‌ ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ, ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣಾ ಪಾಲುದಾರಿಕೆ, ಜಾಗತಿಕ ಸಹಭಾಗಿತ್ವ, ವಾಣಿಜ್ಯ, ವ್ಯಾಪಾರ, ಇಂಧನ, ಕಾನೂನು ಜಾರಿ ಸೇರಿದಂತೆ ಅನೇಕ ಮಹತ್ವದ ವಿಷಯ ಟ್ರಂಪ್‌ ಮತ್ತು ಮೋದಿ ಮಾತುಕತೆ ವೇಳೆ ಚರ್ಚೆಗೆ ಬರಲಿವೆ ಎಂದರು.

ADVERTISEMENT

ಕುತೂಹಲ ಕೆರಳಿಸಿದ ಎಚ್‌1ಬಿ ವೀಸಾ ಪ್ರಸ್ತಾಪ
ಉಭಯ ನಾಯಕರ ಭೇಟಿಯ ವೇಳೆ  ಎಚ್‌1ಬಿ ಉದ್ಯೋಗ ವೀಸಾ ನೀತಿ ಪ್ರಸ್ತಾಪವಾಗುವ ಸಾಧ್ಯತೆ ಕುರಿತು ಕೇಳಲಾದ ಪ್ರಶ್ನೆಗೆ ಹಿರಿಯ ಅಧಿಕಾರಿಯೊಬ್ಬರು ಹೀಗೆ ಉತ್ತರಿಸಿದರು.
‘ಅಮೆರಿಕ ಎಚ್‌1ಬಿ ವೀಸಾ ಪ್ರಸ್ತಾಪಿಸುವ ಸಾಧ್ಯತೆ ಬಹುತೇಕ ಕಡಿಮೆ. ಒಂದು ವೇಳೆ ಭಾರತ ಈ ವಿಷಯವನ್ನು ಪ್ರಸ್ತಾಪಿಸಿದರೆ ಸಾಧಕ–ಬಾಧಕಗಳ ಕುರಿತು ಚರ್ಚಿಸಲು ಅಮೆರಿಕ ಮುಕವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.