ADVERTISEMENT

ಟ್ರಂಪ್‌ ನಡೆಗೆ ಚೀನಾ ಪ್ರತಿಭಟನೆ

ತೈವಾನ್‌ ಅಧ್ಯಕ್ಷೆ ಸಾಯ್ ಇಂಗ್ ವೆನ್ ಜತೆ ಡೊನಾಲ್ಡ್ ಮಾತುಕತೆ

ಪಿಟಿಐ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ಡೊನಾಲ್ಡ್ ಟ್ರಂಪ್       ಸಾಯ್ ಇಂಗ್
ಡೊನಾಲ್ಡ್ ಟ್ರಂಪ್ ಸಾಯ್ ಇಂಗ್   

ವಾಷಿಂಗ್ಟನ್/ಬೀಜಿಂಗ್ : ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾ ಗಿರುವ ಡೊನಾಲ್ಡ್ ಟ್ರಂಪ್ ಅವರು ತೈವಾನ್‌ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಇದರೊಂದಿಗೆ, ಅಮೆರಿಕದ ದಶಕಗಳ ರಾಜತಾಂತ್ರಿಕ ನೀತಿಯನ್ನು ಅವರು ಮುರಿದಂತಾಗಿದೆ.

ಆದರೆ, ಟ್ರಂಪ್‌ ಅವರ ನಡೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ‘ಏಕ ಚೀನಾ ನೀತಿ’ಯನ್ನು ಅಮೆರಿಕ ಗೌರವಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವಾ ಲಯದ ವಕ್ತಾರ ಜೆಂಗ್ ಶಾಂಗ್ ಹೇಳಿದ್ದಾರೆ.

‘ಸದ್ಯದ ವರದಿಗಳ ಬಗ್ಗೆ ನಾವು ಗಮನಹರಿಸಿದ್ದೇವೆ. ವಿಶ್ವದಲ್ಲಿರುವುದು ಒಂದೇ ಚೀನಾ. ಚೀನಾದ ಭೂ ಭಾಗದಲ್ಲೇ ತೈವಾನ್ ಸಹ ಇದೆ. ಏಕ ಚೀನಾ ನೀತಿಗೆ ಬದ್ಧರಾಗಿರುವಂತೆ ಅಮೆರಿಕಕ್ಕೆ ಸೂಚಿಸಲಾಗಿದೆ’ ಎಂದು  ಹೇಳಿದ್ದಾರೆ.

ADVERTISEMENT

ಅಧ್ಯಕ್ಷೆಗೆ ಅಭಿನಂದನೆ: ಈ ವರ್ಷ ಆರಂಭದಲ್ಲಿ ಸಾಯ್ ಇಂಗ್ ವೆನ್ ಅವರು ತೈವಾನ್‌ನ ಅಧ್ಯಕ್ಷೆಯಾಗಿ ಆಯ್ಕೆ ಯಾಗಿದ್ದರು. ಅದಕ್ಕಾಗಿ ಅವರನ್ನು ಟ್ರಂಪ್ ಅಭಿನಂದಿಸಿದ್ದಾರೆ ಎಂದು ಅಧ್ಯ ಕ್ಷೀಯ ಪದವಿ ಹಸ್ತಾಂತರಿಸುವ ಪ್ರಕ್ರಿಯೆ ಗಳನ್ನು ನಡೆಸುವ ತಂಡ ತಿಳಿಸಿದೆ.

ಆರ್ಥಿಕ, ರಾಜಕೀಯ, ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ತಂಡ ತಿಳಿಸಿದೆ.

ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಏಷ್ಯಾದ ನಾಯಕರ ಜತೆ ಸರಣಿ ದೂರವಾಣಿ ಮಾತುಕತೆ ನಡೆಸಲು ಮುಂದಾಗಿರುವ ಟ್ರಂಪ್ ಈಗಾಗಲೇ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಜತೆ ಮಾತುಕತೆ ನಡೆಸಿದ್ದಾರೆ.

ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ಫಿಲಿಫ್ಫೀನ್ಸ್ ಅಧ್ಯಕ್ಷ ರಾಡ್ರಿಗೊ ರೊವಾ ಡೆಟರ್ಟೆ ಮತ್ತು ಸಿಂಗಪುರದ ಪ್ರಧಾನಿ ಲೀ ಸೀನ್ ಲೂಂಗ್ ಜತೆಗೂ ಟ್ರಂಪ್ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಈ ಮಧ್ಯೆ, ಪಾಕಿಸ್ತಾನಕ್ಕೆ ಸಂಬಂಧಿಸಿ ಈಗ ಹೊಂದಿರುವ ನಿಲುವಿನಿಂದ ಟ್ರಂಪ್ ಅವರು ಹಿಂದೆ ಸರಿಯುವುದು ಅನುಮಾನ ಎಂದು ರಿಪಬ್ಲಿಕನ್ ಪಕ್ಷದ ಸಂಸದ ಆಡಂ ಕಿನ್‌ಜಿಂಗರ್ ಹೇಳಿದ್ದಾರೆ.

ರಾಯಭಾರಿ ಕಳುಹಿಸಲು ನಿರ್ಧಾರ:  ಅಧ್ಯಕ್ಷೀಯ ಪದವಿ ಹಸ್ತಾಂತರಿಸುವ ಪ್ರಕ್ರಿಯೆಗಳನ್ನು ನಡೆಸುವ ತಂಡದ ಜತೆ ಮಾತುಕತೆ ನಡೆಸಲು ರಾಯಭಾರಿ ಯೊಬ್ಬರನ್ನು ಕಳುಹಿಸಲು ಪಾಕಿಸ್ತಾನ ನಿರ್ಧರಿಸಿದೆ. ಪ್ರಧಾನಿ ನವಾಜ್  ಅವರಿಗೆ ವಿದೇಶಾಂಗ ವ್ಯವಹಾರಗಳ ಸಹಾಯಕ ರಾಗಿರುವ ತಾರಿಕ್ ಫಾತೆಮಿ ಅವರನ್ನು  ಕಳುಹಿಸಲು ತೀರ್ಮಾನಿಸಲಾಗಿದೆ.

ಅಮೆರಿಕ ಸ್ಪಷ್ಟನೆ
ಟ್ರಂಪ್ ಅವರು ತೈವಾನ್‌ ಅಧ್ಯಕ್ಷೆ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ನಂತರದ ಬೆಳವಣಿಗೆ  ಸಂಬಂಧ ಅಮೆರಿಕ ಸರ್ಕಾರ ಸ್ಪಷ್ಟನೆ ನೀಡಿದ್ದು, ಏಕ ಚೀನಾ ನೀತಿಯನ್ನು ಬೆಂಬಲಿಸುವುದಾಗಿ ಹೇಳಿದೆ.

‘ನೀತಿಗೆ ಸಂಬಂಧಿಸಿದ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರೆ ಎಮಿಲಿ ಹಾರ್ನೆ ಹೇಳಿದ್ದಾರೆ.

ಮುಖ್ಯಾಂಶಗಳು
* ಆಫ್ಘಾನಿಸ್ತಾನ, ಸಿಂಗಪುರ, ಫಿಲಿಪ್ಫೀನ್ಸ್ ಅಧ್ಯಕ್ಷರಿಗೂ ದೂರವಾಣಿ ಕರೆ

* ಆರ್ಥಿಕ, ರಾಜಕೀಯ, ಭದ್ರತೆಗೆ ಸಂಬಂಧಿಸಿದ ವಿಷಯಗಳ ಚರ್ಚೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.