ADVERTISEMENT

ಟ್ರಂಪ್‌ ಪ್ರಮಾಣ ವಚನಕ್ಕೆ ಕ್ಷಣಗಣನೆ

ಪಿಟಿಐ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌್ ಅವರ ಹಿಮದ ಮೂರ್ತಿಯನ್ನು ಮ್ಯಾಗ್ಡಲಿನಾ ಕೆಮಿಯರ್‌್ ಅವರು ಜರ್ಮನಿಯ ವೆಂಜೆನ್‌ಬಾಕ್‌ನ ತಮ್ಮ ನಿವಾಸದ ಉದ್ಯಾನದಲ್ಲಿ ಸಿದ್ಧಪಡಿಸಿದರು   –ಎಎಫ್‌ಪಿ ಚಿತ್ರ
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌್ ಅವರ ಹಿಮದ ಮೂರ್ತಿಯನ್ನು ಮ್ಯಾಗ್ಡಲಿನಾ ಕೆಮಿಯರ್‌್ ಅವರು ಜರ್ಮನಿಯ ವೆಂಜೆನ್‌ಬಾಕ್‌ನ ತಮ್ಮ ನಿವಾಸದ ಉದ್ಯಾನದಲ್ಲಿ ಸಿದ್ಧಪಡಿಸಿದರು –ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌ : ಟ್ರಂಪ್‌ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತೀಯ ಅಮೆರಿಕನ್ನರೂ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಾವಿರಾರು ಜನರು ಬರುತ್ತಿದ್ದಾರೆ. ಶುಕ್ರವಾರ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ‘ಅಮೆರಿಕವನ್ನು ಪುನಃ ಶ್ರೇಷ್ಠ ರಾಷ್ಟ್ರವಾಗಿಸೋಣ’ ಎಂಬ ಘೋಷ ವಾಕ್ಯ ನೀಡಲಾಗಿದೆ. ಬೈಬಲ್‌ನ ಎರಡು ಪ್ರತಿಗಳ ಜತೆಗೆ ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಮಾರಂಭಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ. ಕಾರ್ಯಕ್ರಮ ನಡೆಯುವ  ಸ್ಥಳದಲ್ಲಿ ಅಭೂತಪೂರ್ವ ಭದ್ರತೆ ಏರ್ಪಡಿಸಲಾಗಿದೆ. ಅಧ್ಯಕ್ಷ ಬರಾಕ್‌ ಒಬಾಮಾ ಅವರು ಮಂಗಳವಾರ ಸಿದ್ದತೆಗಳನ್ನು ಪರಿಶೀಲಿಸಿದರು.

‘ಟ್ರಂಪ್‌ ಅವರಿಗೆ ಪ್ರಚಂಡ ಬೆಂಬಲ ಇದೆ ಎಂಬುದನ್ನು ಶುಕ್ರವಾರ ನಾವು ಕಾಣಲಿದ್ದೇವೆ’  ಎಂದು ಶ್ವೇತ ಭವನದ ನಿಯೋಜಿತ ಮಾಧ್ಯಮ ಕಾರ್ಯದರ್ಶಿ ಸೀನ್‌ ಸ್ಪೈಸರ್‌ ಹೇಳಿದ್ದಾರೆ.

ಟ್ರಂಪ್‌ ಬೆಂಬಲಿಗರು ವಾಷಿಂಗ್ಟನ್‌ನಲ್ಲಿ ಈಗಾಗಲೇ ಸರಣಿ ಕಾರ್ಯಕ್ರಮಗಳನ್ನು ಆರಂಭಿಸಿದ್ದಾರೆ. ದೇಶದ ವಿವಿಧ ಭಾಗಗಳಿಂದ ಬರುವ ಸಂಗೀತಗಾರರು ಟ್ರಂಪ್‌ ಬೆಂಬಲಿಗರ ಮುಂದೆ ಸಂಗೀತ ಪ್ರದರ್ಶಿಲಿದ್ದಾರೆ.

ನೃತ್ಯ  ಪ್ರದರ್ಶನಕ್ಕಾಗಿ ತೆರಳಿರುವ ಬಾಲಿವುಡ್‌ ಕಲಾವಿದರ ತಂಡ
ಮುಂಬೈ(ಪಿಟಿಐ):
ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಬಾಲಿವುಡ್‌ನ 30 ಮಂದಿ ಕಲಾವಿದರ ತಂಡ ನೃತ್ಯ ಪ್ರದರ್ಶನ ನೀಡಲಿದೆ.

ಮುಂಬೈನ ನಲಸೋಪರದ  ಯುವ ನೃತ್ಯ ಸಂಯೋಜಕ ಸುರೇಶ್‌ ಮುಕುಂದ್‌ ಅವರು ಕಲಾವಿದರಿಗೆ ತರಬೇತಿ ನೀಡಿದ್ದಾರೆ. ಈಗಾಗಲೇ ವಾಷಿಂಗ್ಟನ್‌ಗೆ ತೆರಳಿರುವ ಕಲಾವಿದರು ಅಲ್ಲಿ ನೃತ್ಯ ತಾಲೀಮು ನಡೆಸುತ್ತಿದ್ದಾರೆ. ‘ಇದು ಜೀವಮಾನದಲ್ಲಿ ಲಭಿಸಿರುವ ಬಹುದೊಡ್ಡ ಅವಕಾಶ. ನಾನು ಮತ್ತು ಸಹಾಯಕ ಕಾರ್ತಿಕ್‌ ಪ್ರಿಯದರ್ಶನ್‌ ಭಾರತದ ಕಲಾವಿದರಿಗೆ, ಅಮೆರಿಕದ ಕಲಾವಿದರೊಂದಿಗೆ ಹೆಜ್ಜೆ ಹಾಕಲು ತರಬೇತಿ ನೀಡುತ್ತಿದ್ದೇವೆ’ ಎಂದು ಸುರೇಶ್‌ ಮುಕುಂದ್‌ ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ತಂಡ ಭಾರತದ ಶಾಸ್ತ್ರೀಯ ಮತ್ತು ಬಾಲಿವುಡ್‌ ನೃತ್ಯವನ್ನು ಸಂಯೋಜಿಸಿ ಏಳು ನಿಮಿಷಗಳ ಕಾಲ ನೃತ್ಯ ಪ್ರದರ್ಶನ ನೀಡಲಿದೆ’ ಎಂದು ಅವರು ಹೇಳಿದ್ದಾರೆ.

‘ಅಮೆರಿಕದ ವೆಸ್ಟ್‌ಲಾನ್‌ನಲ್ಲಿ ಶುಕ್ರವಾರ (ಜ.20) ಕಾರ್ಯಕ್ರಮ ನಡೆಯಲಿದ್ದು, ಮಾಜಿ ಮಿಸ್‌ ಇಂಡಿಯಾ ಮನಸ್ವಿ ಮಮ್ಗಾಯಿ ಅವರು ನೃತ್ಯ ತಂಡದ ನೇತೃತ್ವ ವಹಿಸಲಿದ್ದಾರೆ’ ಎಂದು ತಿಳಿಸಿದ್ದಾರೆ. ಮುಕುಂದ್‌ ಅವರ ‘ಕಿಂಗ್ಸ್‌ ಯುನೈಟೆಡ್‌ ಇಂಡಿಯಾ’ ಹೆಸರಿನ ನೃತ್ಯತಂಡ 2015ರಲ್ಲಿ ವಿಶ್ವ ನೃತ್ಯ ಚಾಂಪಿಯನ್‌ಷಿಪ್‌ ಪ್ರಶಸ್ತಿ ಪಡೆದಿತ್ತು.

***
ಸಮಾರಂಭದಲ್ಲಿ ಭಾಗವಹಿಸಿ ಬೆಂಬಲ ನೀಡಲು ಬಯಸಿರುವ ಜನರ ಉತ್ಸುಕತೆ ಕಂಡು ಟ್ರಂಪ್‌ ಮೂಕವಿಸ್ಮಿತರಾಗಿದ್ದಾರೆ
ಸೀನ್‌  ಸ್ಪೈಸರ್‌,
ನಿಯೋಜಿತ ಮಾಧ್ಯಮ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.