ADVERTISEMENT

ಡಿ.4ರಿಂದ ಮಲ್ಯ ವಿಚಾರಣೆ

ಪಿಟಿಐ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸೋಮವಾರ ವಿಚಾರಣೆಗೆ ಹಾಜರಾದ ವಿಜಯ್ ಮಲ್ಯ – ಎಪಿ ಚಿತ್ರ
ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸೋಮವಾರ ವಿಚಾರಣೆಗೆ ಹಾಜರಾದ ವಿಜಯ್ ಮಲ್ಯ – ಎಪಿ ಚಿತ್ರ   

ಲಂಡನ್: ಭಾರತಕ್ಕೆ ಹಸ್ತಾಂತರ ಪ್ರಕರಣದ ವಿಚಾರಣೆ ಸಂಬಂಧ ಸೋಮವಾರ ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಉದ್ಯಮಿ ವಿಜಯ್ ಮಲ್ಯ ಹಾಜರಾದರು. ಡಿಸೆಂಬರ್ 4ರಿಂದ 8 ದಿನಗಳ ಕಾಲ ಪ್ರಕರಣದ ವಿಚಾರಣೆ ನಿಗದಿಯಾಗಿದೆ.

ಹಸ್ತಾಂತರ ಪ್ರಕರಣದಲ್ಲಿ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ವಾರಂಟ್ ಜಾರಿಗೊಳಿಸಿದ ಬಳಿಕ ಜಾಮೀನಿನ ಮೇಲೆ ಹೊರಗಿರುವ ಮಲ್ಯ ಅವರಿಗೆ ಡಿಸೆಂಬರ್ 4ರ ವಿಚಾರಣೆಗೆ ಹಾಜರಾಗುವಂತೆ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯ ಸೂಚನೆ ನೀಡಿತು. ಅಲ್ಲಿಯವರೆಗೂ ಜಾಮೀನಿನ ನಿಯಮಗಳು ಜಾರಿಯಲ್ಲಿರಲಿವೆ ಎಂದು ನ್ಯಾಯಾಲಯ ಹೇಳಿತು.

ನ್ಯಾಯಾಲಯದ ಹೊರಗಡೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಲ್ಯ, ‘ಕೋರ್ಟ್‌ನಲ್ಲಿ ಎಲ್ಲವೂ ತಿಳಿಯಲಿದೆ. ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಪುನರುಚ್ಚರಿಸಿದರು.

ADVERTISEMENT

‘ದಾಖಲೆಗಳನ್ನು ನ್ಯಾಯಾಧೀಶರಾದ ಅರ್ಬುತ್ನೋಟ್ ಅವರಿಗೆ ಕಳೆದ ವಾರವೇ ಸಲ್ಲಿಸಿದ್ದೇವೆ. ಚೆಂಡು ಈಗ ಭಾರತ ಸರ್ಕಾರದ ಅಂಗಳದಲ್ಲಿದೆ. ಮುಂದಿನ ವಾರದೊಳಗೆ ಸರ್ಕಾರದ ಪರ ವಕೀಲರು ಅದಕ್ಕೆ ಪ್ರತಿಕ್ರಿಯೆ ಸಲ್ಲಿಸಬೇಕು’ ಎಂದು ಮಲ್ಯ ಅವರ ಕಾನೂನು ತಂಡದ ಮುಖ್ಯಸ್ಥ ಕಾರ್ಲ್ ಮಾಂಟ್‌ಗೊಮೆರಿ ಹೇಳಿದ್ದಾರೆ.

ತ್ವರಿತ ವಿಚಾರಣೆಗೆ ಆಗ್ರಹಿಸಿರುವ ಅವರು, ವಿಚಾರಣೆ ವಿಳಂಬವಾದಲ್ಲಿ ಭಾರತ ಸರ್ಕಾರಕ್ಕೆ ಹೊಸ ದಾಖಲೆಗಳನ್ನು ಸಲ್ಲಿಸಲು ಸಮಯಾವಕಾಶ ದೊರೆಯಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ಗಳಿಗೆ ಸುಮಾರು ₹9 ಸಾವಿರ ಕೋಟಿ ವಂಚಿಸಿದ ಆರೋಪ ಮಲ್ಯ ಅವರ ಮೇಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.