ADVERTISEMENT

ಡೀಸೆಲ್ ಕಾರಿನಿಂದ ಮಾಲಿನ್ಯ: ಯುರೋಪ್‌ನಲ್ಲಿ ವರ್ಷಕ್ಕೆ 5 ಸಾವಿರ ಜನರ ಸಾವು

ಏಜೆನ್ಸೀಸ್
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಡೀಸೆಲ್ ಕಾರಿನಿಂದ ಮಾಲಿನ್ಯ: ಯುರೋಪ್‌ನಲ್ಲಿ ವರ್ಷಕ್ಕೆ 5 ಸಾವಿರ ಜನರ ಸಾವು
ಡೀಸೆಲ್ ಕಾರಿನಿಂದ ಮಾಲಿನ್ಯ: ಯುರೋಪ್‌ನಲ್ಲಿ ವರ್ಷಕ್ಕೆ 5 ಸಾವಿರ ಜನರ ಸಾವು   

ಪ್ಯಾರಿಸ್: ಡೀಸೆಲ್ ಕಾರುಗಳಿಂದ ಉಂಟಾಗುವ ಮಾಲಿನ್ಯದಿಂದ ಯುರೋಪ್ ಖಂಡವೊಂದರಲ್ಲೇ ವರ್ಷಕ್ಕೆ 5000 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ಎನ್ವಿರಾನ್ಮೆಂಟಲ್ ರಿಸರ್ಚ್ ಲೆಟರ್ಸ್ ಎಂಬ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದೆ.

ಡೀಸೆಲ್ ವಾಹನಗಳು ಉಗುಳುವ ಹೆಚ್ಚು ಮಲಿನಕಾರಕ ಹೊಗೆಯಿಂದ 2015ರಲ್ಲಿ ಜಗತ್ತಿನಲ್ಲಿ 38,000 ಸಾವು ಸಂಭವಿಸಿವೆ ಎಂದು ಕಳೆದ ಮೇನಲ್ಲಿ ’ನೇಚರ್’ ಪತ್ರಿಕೆ ಕೂಡಾ ವರದಿ ಮಾಡಿತ್ತು.

ಲಘು ಸರಕು ಸಾಗಣೆ ಡೀಸೆಲ್ ವಾಹನಗಳು (ಎಲ್‌ಡಿಡಿವಿ) ಹಾಗೂ ಅವು ಉಗುಳುವ ನೈಟ್ರೋಜನ್ ಆಕ್ಸೈಡ್‌ ಪ್ರಮಾಣ ತಗ್ಗದಿದ್ದರೆ ವಾಯು ಮಾಲಿನ್ಯದಿಂದ ಮೃತಪಡುವವರ ಸಂಖ್ಯೆ ಹೆಚ್ಚಲಿದೆ ಎಂದು ವರದಿ ಎಚ್ಚರಿಸಿದೆ. ಈ ತಿಂಗಳ ಆರಂಭದಿಂದ ಯುರೋಪ್‌ನಲ್ಲಿ ಮಾಲಿನ್ಯ ಹೊರಸೂಸುವಿಕೆ ಪರೀಕ್ಷೆಗಳನ್ನು ಕಠಿಣಗೊಳಿಸಲಾಗಿದೆ.

ADVERTISEMENT

ಡೀಸೆಲ್‌ಗೇಟ್: ವಾಹನಗಳ ಹೊಗೆ ಹೊರಸೂಸುವಿಕೆ ಪರೀಕ್ಷೆಯಲ್ಲಿ ವಂಚನೆ ಮಾಡಿದ್ದಾಗಿ 2015ರಲ್ಲಿ ಕಾರು ತಯಾರಿಕಾ ಕಂಪೆನಿ ಫೋಕ್ಸ್‌ವ್ಯಾಗನ್ ತಪ್ಪೊಪ್ಪಿಕೊಂಡಿತ್ತು. ಇದಾದ ಬಳಿಕ ಬಹುತೇಕ ಕಾರು ತಯಾರಿಕಾ ಕಾಂಪೆನಿಗಳ ಮೇಲೆ ಸಂಶಯ ಶುರುವಾಗಿತ್ತು.

ಹೆಚ್ಚು ಬಾಧಿತ ದೇಶಗಳು:

ಇಟಲಿ, ಜರ್ಮನಿ, ಫ್ರಾನ್ಸ್

ಅಂಕಿ–ಅಂಶ

* 10 ಕೋಟಿ ಸದ್ಯ ಯುರೋಪ್‌ನಲ್ಲಿರುವ ಡೀಸೆಲ್ ಕಾರುಗಳ ಸಂಖ್ಯೆ

* ಶೇ 40 ಯುರೋಪ್, ನಾರ್ವೆ ಹಾಗೂ ಸ್ವಿಟ್ಜರ್ಲೆಂಡ್‌ನ ಸರಕು ಮತ್ತು ಸಾರಿಗೆ ಡೀಸೆಲ್ ವಾಹನಗಳು ಉಗುಳುವ ನೈಟ್ರೋಜನ್ ಆಕ್ಸೈಡ್ ಪ್ರಮಾಣ

ನೈಟ್ರೋಜನ್ ಆಕ್ಸೈಡ್ ಅಪಾಯಕಾರಿ

ಡೀಸೆಲ್ ಕಾರುಗಳು ಭೂವಾತಾವರಣ  ಬಿಸಿಯಾಗಲು ಕಾರಣವಾಗುವ ಇಂಗಾಲದ ಅನಿಲವನ್ನು ಕಡಿಮೆ ಉತ್ಪಾದಿಸುತ್ತವೆ. ಆದರೆ ನೈಟ್ರೋಜನ್ ಆಕ್ಸೈಡ್‌ ಹೆಚ್ಚು ಉತ್ಪಾದಿಸುತ್ತವೆ. ನೈಟ್ರಿಕ್ ಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳು ಆಮ್ಲ ಮಳೆ ಹಾಗೂ ಉಸಿರುಗಟ್ಟಿಸುವ ಹೊಗೆಗೆ ಕಾರಣವಾಗುತ್ತವೆ. ದೀರ್ಘಕಾಲದಲ್ಲಿ ಇವು ಉಸಿರಾಟದ ತೊಂದರೆ, ಕಣ್ಣುರಿ, ಹಸಿವಾಗದಿರುವಿಕೆ, ಹಲ್ಲಿನ ಸಮಸ್ಯೆ, ತಲೆನೋವು, ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಅಧ್ಯಯನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.