ADVERTISEMENT

ತನಿಖೆಗೆ ವಿಶೇಷ ವಕೀಲರ ನೇಮಕ

ಟ್ರಂಪ್‌ಗೆ ರಷ್ಯಾ ನೆರವು ವಿವಾದ

ಪಿಟಿಐ
Published 18 ಮೇ 2017, 19:30 IST
Last Updated 18 ಮೇ 2017, 19:30 IST
ರಾಬರ್ಟ್‌
ರಾಬರ್ಟ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಪರವಾಗಿ ರಷ್ಯಾ ವಹಿಸಿರುವ ಪಾತ್ರದ ಕುರಿತು ತನಿಖೆ ನಡೆಸಲು ತನಿಖಾ ದಳ ‘ಎಫ್‌ಬಿಐ’ನ  ಮಾಜಿ ನಿರ್ದೇಶಕ ರಾಬರ್ಟ್‌ ಮುಲ್ಲೇರ್‌ ಅವರನ್ನು ವಿಶೇಷ ವಕೀಲರನ್ನಾಗಿ ನೇಮಕ ಮಾಡಲಾಗಿದೆ.

ಈ ವಿಷಯದಲ್ಲಿ ತನಿಖೆ ನಡೆಸುತ್ತಿದ್ದ ಎಫ್‌ಬಿಐ ನಿರ್ದೇಶಕ ಜೇಮ್ಸ್‌ ಕೋಮಿ ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಟ್ರಂಪ್‌ ಹರಿಹಾಯ್ದಿದ್ದ ಕಾರಣ ಅವರನ್ನು ಕಳೆದ ವಾರ ವಜಾಗೊಳಿಸಲಾಗಿತ್ತು. ಈ ಬೆನ್ನಲ್ಲೇ ಈಗ ಆಟಾರ್ನಿ ಜನರಲ್‌ ಅವರು ರಾಬರ್ಟ್‌ ಅವರನ್ನು ನೇಮಿಸಿದ್ದಾರೆ.

‘ದಕ್ಷ ವಕೀಲರಾಗಿರುವ ರಾಬರ್ಟ್‌ ಅವರು ಈ ತನಿಖೆಯನ್ನು ರಾಜಕೀಯದ ಒತ್ತಡವಿಲ್ಲದೇ, ಪಾರದರ್ಶಕವಾಗಿ ನಡೆಸುವ ನಂಬಿಕೆ ಇದೆ’ ಎಂದು ಸಂಸದ ರಿಚರ್ಡ್‌ ಬುರ್ಡ್‌ ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಟ್ರಂಪ್‌ ಪ್ರತಿಕ್ರಿಯೆ: ರಾಬರ್ಟ್‌ ಅವರ ನೇಮಕದ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್‌ ಅವರು, ‘ರಾಜಕೀಯ ದ್ವೇಷ ಸಾಧನೆಗಾಗಿ ಈ ತನಿಖೆ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನನ್ನ ವಿರುದ್ಧ ಯಾರೇ ಏನೇ ಪಿತೂರಿ ಮಾಡಲಿ, ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಮೇಲಿರುವ ಆರೋಪಗಳೆಲ್ಲಾ ನಿರಾಧಾರ ಎಂದು ಈ ತನಿಖೆಯಿಂದ ಎಲ್ಲರಿಗೂ ಶೀಘ್ರದಲ್ಲಿಯೇ ಗೊತ್ತಾಗಲಿದೆ. ಆ ವಿಶ್ವಾಸ ನನಗಿದೆ’ ಎಂದಿದ್ದಾರೆ.

‘ಈ ತನಿಖೆ ಶೀಘ್ರ ಮುಗಿಯಲಿ ಎನ್ನುವುದೇ ನನ್ನ ಆಕಾಂಕ್ಷೆ. ನಾನು ನಿರಪರಾಧಿ ಎಂದು ಬೇಗನೇ ಸಾಬೀತಾಗಲಿ ಎಂದು ನಾನೂ ಕಾಯುತ್ತಿದ್ದೇನೆ. ಅದೇನೇ ಇದ್ದರೂ ದೇಶದ ಜನರ ಸೇವೆಯನ್ನು ನಾನು ಮುಂದುವರಿಸಿಕೊಂಡು ಹೋಗಲು ಈ ತನಿಖೆ ನನಗೆ ಅಡ್ಡಗಾಲು ಹಾಕಲಾರದು’ ಎಂದಿದ್ದಾರೆ.

ಮಾಧ್ಯಮಗಳ ವಿರುದ್ಧ ಟ್ರಂಪ್‌ ಕಿಡಿ
ವಾಷಿಂಗ್ಟನ್‌:
ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈಗ ಈ ಸಿಟ್ಟನ್ನು ನೇರವಾಗಿ ಮಾಧ್ಯಮಗಳ ಮೇಲೆ ಹಾಕಿದ್ದಾರೆ.

ಮಾಧ್ಯಮಗಳು ತಮಗೆ ಮಾಡಿರುವಷ್ಟು ಅನ್ಯಾಯ ದೇಶದ ಇತಿಹಾಸದಲ್ಲಿ ಬೇರಾವ ರಾಜಕಾರಣಿಗೂ ಮಾಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ‘ನನ್ನನ್ನು ಮಾಧ್ಯಮಗಳು ತೀರಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿವೆ.  ಆದರೆ ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂಥ ನಕಾರಾತ್ಮಕ ಟೀಕೆಗಳು ಇದ್ದರೇನೇ ವ್ಯಕ್ತಿ ಬಲಶಾಲಿ ಆಗುವುದು. ಆದ್ದರಿಂದಲೇ ನಾನು ಜಯ ಸಾಧಿಸಿರುವುದು’ ಎಂದು ಇಲ್ಲಿಯ ‘ಕೋಟ್ಸ್‌ ಗಾರ್ಡ್‌ ಅಕಾಡೆಮಿ’ಯ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

‘ನಾವು ಒಳ್ಳೆತನದಿಂದ ಕೆಲಸ ಮಾಡಿದಷ್ಟೂ ನಕಾರಾತ್ಮಕ ಟೀಕೆಗಳು ಕೇಳಿಬರುವುದು ಸಹಜ.  ಇಂಥ ಟೀಕೆಗಳಿಗೆ ಕಿವಿಗೊಡದೆ ಹೋರಾಟ ಮುಂದುವರಿಸಬೇಕು. ಇದನ್ನೇ ನಾನೂ ಮಾಡುತ್ತಿದ್ದೇನೆ. ಅಷ್ಟಕ್ಕೂ ನಾನು ಮಾಧ್ಯಮಗಳಿಗಾಗಿ ಚುನಾಯಿತನಾಗಿಲ್ಲ. ಜನರಿಗಾಗಿ ನಾನು ಇದ್ದೇನೆ. ಅವರಿಗಾಗಿ ಕೆಲಸ ಮುಂದುವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಮುಖ್ಯಾಂಶಗಳು

* ‘ಎಫ್‌ಬಿಐ’ನ  ಮಾಜಿ ನಿರ್ದೇಶಕ ರಾಬರ್ಟ್‌ ಮುಲ್ಲೇರ್‌ ನೇಮಕ
* ತನಿಖೆ ಶೀಘ್ರ ಪೂರ್ಣ: ಅಧ್ಯಕ್ಷರ ಆಶಯ
* ದೇಶ ಸೇವೆಗೆ ತನಿಖೆ ಅಡ್ಡಿಯಾಗದು: ಟ್ರಂಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.