ADVERTISEMENT

ದೋಣಿ ದುರಂತ: ಮುಂದುವರಿದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ಮೊಕ್ಪೊ (ದಕ್ಷಿಣ ಕೊರಿಯಾ): ಇಲ್ಲಿನ ಬಿಯಾಂಗ್‌ಪಂಗ್‌ ದ್ವೀಪದ ಸಮೀಪ ಬುಧ­ವಾರ  ಸಂಭ­ವಿ­ಸಿದ ದೋಣಿ ದುರಂತ­ದಲ್ಲಿ ಕಣ್ಮರೆಯಾಗಿರುವ 287 ಜನರ ಪತ್ತೆಗಾಗಿ ಭರ­ದಿಂದ ಪರಿಹಾರ ಕಾರ್ಯಾ­ಚರಣೆ ಮುಂದು­ವರಿ­ದರೂ ಮಳೆ ಹಾಗೂ ಪ್ರತಿಕೂಲ ಹವಾಮಾನ­ಗಳು ಅಡ್ಡಿಯುಂಟು ಮಾಡಿವೆ.

ನಾಲ್ಕು ಜನ ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಸೇರಿ ಘಟನೆಯಲ್ಲಿ ಒಟ್ಟು 9 ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, ಇನ್ನು ಉಳಿದವರು ದೋಣಿಯಲ್ಲಿ ಅಥವಾ ಸಮುದ್ರದ ಶೀತಲ ನೀರಿನಲ್ಲಿ ಮುಳುಗಿ ಸತ್ತಿರಬ­ಹುದು ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳದಿಂದ ಮೃತ­ದೇಹ­ಗಳನ್ನು  ಮೊಕ್ಪೊದ  ಆಸ್ಪ­ತ್ರೆಗೆ ಆಂಬು­ಲೆನ್ಸ್‌­ನಲ್ಲಿ ಕೊಂಡೊ­ಯ್ಯು­ತ್ತಿ­­ರು­ವಾಗ ಮಕ್ಕ­ಳ­ನ್ನು ಕಳೆದು­ಕೊಂಡ ಹೆತ್ತವರ ಅಳು, ಆಕ್ರಂದನ ಮುಗಿಲು ಮುಟ್ಟಿತ್ತು.

ದೋಣಿಯಲ್ಲಿದ್ದ ಒಟ್ಟು 475 ಜನ­ರಲ್ಲಿ 325 ವಿದ್ಯಾರ್ಥಿಗಳು  ದ್ವೀಪ ಪ್ರವಾ­ಸಕ್ಕೆ ತೆರಳುತ್ತಿದ್ದರು. ಈ  ವಿದ್ಯಾ­ರ್ಥಿ­ಗಳ ಹೆತ್ತವರು ಸಿಯೋಲ್‌ ಸಮೀ­ಪದ  ಅನ್ಸನ್‌ನ ಡನ್ವನ್‌ ಪ್ರೌಢ­ಶಾಲೆಯ ಎದುರು ಒಟ್ಟು­ಗೂಡಿದ್ದರು. ಆಕ್ರೋ­ಶಿತ ಸಂಬಂಧಿಕರು ಹತಾಶೆ­ಯಿಂದ  ಘೋಷಣೆ ಕೂಗಿದರು.  ದುರಂತ ಸ್ಥಳದಲ್ಲಿ ದೋಣಿ ತಲೆ­ಕೆಳ­ಗಾಗಿ ಬಿದ್ದಿದ್ದು, ದೋಣಿಯ ಅಂಚು ಮಾತ್ರ ಕಾಣುತ್ತಿದೆ.

ದುರಂತದಲ್ಲಿ ಸಾವನ್ನಪ್ಪಿದ 24 ವರ್ಷದ ಶಿಕ್ಷಕಿ ಚೋಯ್‌ ಹೇ ಜಂಗ್‌ ಮೃತದೇಹಕ್ಕಾಗಿ ಆಸ್ಪತ್ರೆಯ ಹೊರಗೆ ಕಾಯುತ್ತಿದ್ದ ಆಕೆಯ ತಂದೆ ಚಾಯ್‌ ಜಾಕ್ಯೂ ಮಾತನಾಡಿ, ‘ ಆಕೆ ತುಂಬ ಕ್ರಿಯಾಶೀಲ ಶಿಕ್ಷಕಿಯಾಗಿದ್ದಳು. ಭವಿಷ್ಯ­ದಲ್ಲಿ ಒಬ್ಬ ಉತ್ತಮ ನಾಯಕಿಯಾ­ಗಲು ಆಕೆ ಬಯಸಿದ್ದಳು’  ಎಂದು ಕಣ್ಣೀರು ಸುರಿಸಿದರೆ, ಅಲ್ಲೆ ಪಕ್ಕದಲ್ಲಿದ್ದ  ಮೃತ ಶಿಕ್ಷಕಿಯ ತಾಯಿ ತನ್ನ ತಲೆಯನ್ನು ಮಂಡಿಯಲ್ಲಿರಿಸಿ­ಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಸುಮಾರು 400 ಯೋಧರು ಕಾರ್ಯಾಚರಣೆಯಲ್ಲಿ ನಿರತ­ರಾಗಿ­ದ್ದಾರೆ. ಮಗುಚಿಬಿದ್ದ ದೋಣಿ­ಯಲ್ಲಿ ಸಿಲುಕಿಕೊಂಡಿ­­­ರುವ­ವರನ್ನು ಹಾಗೂ ದೋಣಿಯಲ್ಲಿರುವ ಕಚ್ಚಾ­ವಸ್ತು­ಗಳನ್ನು ತೆಗೆಯಲು ಕ್ರೇನ್‌ ಹೊಂದಿರುವ ಮೂರು ಹಡಗುಗಳು ಇನ್ನೆರಡು ದಿನಗಳಲ್ಲಿ ಬರುವ ನಿರೀಕ್ಷೆಯಿದೆ.
ಮುಳುಗಿರುವ ದೋಣಿ ಒಳಗೆ ಆಮ್ಲಜನಕ ಪೂರೈಸಲು  ಯತ್ನಿಸಲಾ­ಗುತ್ತಿದೆ.

ಅದಕ್ಕಿಂತ ಮೊದಲು ಅವರು ದೋಣಿ ಒಳಗೆ ಹೋಗಬೇಕು ಎಂದು ಕರಾವಳಿ ರಕ್ಷಣಾ ಪಡೆಯ ಅಧಿಕಾರಿ ಕಿಮ್‌ ಜೇನ್‌ ತಿಳಿಸಿದ್ದಾರೆ.

ದುರಂತಕ್ಕೂ ಮುನ್ನ ಹೆತ್ತವರಿಗೆ ಸಂದೇಶ
ಸೋಲ್‌ (ಎಎಫ್‌ಪಿ):
ದ್ವೀಪಕ್ಕೆ ಪ್ರವಾಸಕ್ಕೆ  ತೆರಳುತ್ತಿದ್ದ ಮಕ್ಕಳು ದೋಣಿ ದುರಂತಕ್ಕೂ ಮುನ್ನ ಕೊನೆಗಳಿಗೆಯಲ್ಲಿ ತಮ್ಮ ಹೆತ್ತವರಿಗೆ ಸಂದೇಶಗಳನ್ನು ಕಳುಹಿಸಿದ್ದು, ಮನ ಕಲಕುವಂತಿದೆ.

ಮಕ್ಕಳ ಸಂದೇಶಗಳಲ್ಲಿ ಪ್ರೀತಿ, ಭಯ ಹಾಗೂ ನಿರಾಶೆ ತುಂಬಿದ್ದು, ಈ ಸಂದೇಶಗಳು ಜನರ ಹೃದಯವನ್ನು ಘಾಸಿಗೊಳಿಸುವಂತಿದೆ.
ದುರಂತದ ಮುನ್ಸೂಚನೆ ದೊರೆತ ವಿದ್ಯಾರ್ಥಿ ಶಿನ್‌ ಯಂಗ್‌ಜಿನ್‌್ ಎಂಬಾತ ತನ್ನ ಅಮ್ಮನ ಮೊಬೈಲ್‌ಗೆ ‘ನಾನು ಇನ್ನೊಂದು ಬಾರಿ ನಿನಗೆ ಇದನ್ನು ಹೇಳು­ತ್ತೇನೆ ಎಂಬ ಧೈರ್ಯವಿಲ್ಲ. ಐ ಲವ್‌ ಯೂ’ ಎಂದು ಕಳುಹಿಸಿದ್ದಾನೆ. ಹೃದಯ ಕರಗುವಂತಿರುವ  ಈ ಸಂದೇಶ ದಕ್ಷಿಣ ಕೊರಿಯಾದ ಎಲ್ಲಾ ಮಾಧ್ಯಮ­ಗಳಲ್ಲಿ ಪ್ರಸಾರವಾಗುತ್ತಿದೆ.

ಮಗ  ದುರಂತದಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ  ಎಂಬ ಅರಿವಿಲ್ಲದೇ ತಾಯಿ ಮಗನಿಗೆ ‘ ಐ ಲವ್‌ ಯೂ ಟೂ’ ಪ್ರತಿಕ್ರಿಯಿಸಿದ್ದಾರೆ. ಅದೃಷ್ಟ­ವೆಂದರೆ ದೋಣಿ ತಲೆಕೆಳಗಾಗಿ ಮುಳುಗುವ ಹಂತದಲ್ಲಿದ್ದಾಗ ಅದೃಷ್ಟವ­ಶಾತ್‌ ಪಾರಾಗಿ ಬದುಕಿದ 179 ಜನರಲ್ಲಿ ಶಿನ್‌ ಕೂಡಾ ಒಬ್ಬ.

ಇನ್ನೊಬ್ಬ ವಿದ್ಯಾರ್ಥಿ 16 ವರ್ಷದ ಕಿಮ್‌ ಯೂಂಗ್‌ಕಿ ಸಹಾಯಕ್ಕಾಗಿ ತನ್ನ ಸಹೋದ­ರನಿಗೆ ಸಂದೇಶ ಕಳುಹಿಸಿ ‘ದೋಣಿ ಒಂದು ಕಡೆಯಿಂದ ಮುಳು­ಗು­ತ್ತಿದೆ. ನಾನಿರುವ ಕೋಣೆ 45 ಡಿಗ್ರಿಯಷ್ಟು ಓರೆಯಾಗಿದೆ. ನನ್ನ ಮೊಬೈಲ್‌ ಸಹಾ ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಕಳುಹಿಸಿದ್ದನು. 

ಆದಕ್ಕೆ ಆತನ ಅಣ್ಣ ‘ಭಯಪಡಬೇಡ. ನಾನು ಸಹಾಯಕ್ಕಾಗಿ ಬರುತ್ತಿದ್ದೇನೆ. ದೋಣಿ­ಯಲ್ಲಿದ್ದವರು ಹೇಳಿದಂತೆ ಮಾಡು. ನೀನು ಸುರಕ್ಷಿತವಾಗಿ ಹಿಂತಿರು­ಗುತ್ತಿ’ ಎಂದು  ಉತ್ತರ ನೀಡಿದ್ದನು. ಬಳಿಕ ಇವರಿಬ್ಬರ ನಡುವೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಕಾಣೆಯಾದವರ ಪಟ್ಟಿಯಲ್ಲಿ ಕಿಮ್‌ ಹೆಸರು ಸೇರಿಕೊಂಡಿದೆ.

ದೋಣಿ ಮುಳುಗುತ್ತಿರುವಾಗ ದೋಣಿಯ ಸಿಬ್ಬಂದಿ ಪ್ರಯಾಣಿಕರಿಗೆ ದೋಣಿಯಲ್ಲೇ ಇರುವಂತೆ ಸೂಚನೆ ನೀಡಿರುವುದು, ಈಗ ವಿವಾದಕ್ಕೆ ಕಾರಣವಾಗಿದೆ. ಆಕ್ರೋಶಿತ ಸಂಬಂಧಿಕರು ‘ಇದರಿಂದ ಯಾರಿಗೂ ದೋಣಿ­ಯಿಂದ ಜಿಗಿದು ತಪ್ಪಿಸಿಕೊಳ್ಳಲಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

18 ವರ್ಷದ ಶಿನ್‌ ಎಂಬಾಕೆ ತನ್ನ ತಂದೆಗೆ ಸಂದೇಶ ಕಳುಹಿಸಿ, ‘ಅಪ್ಪಾ ಚಿಂತೆ ಮಾಡಬೇಡ. ನಾನು ಜೀವರಕ್ಷಕ ಉಡುಗೆಯನ್ನು ಧರಿಸಿದ್ದೇನೆ. ನಾನು ದೋಣಿಯಲ್ಲಿರುವ ಇತರ ಹುಡುಗಿ­ಯ­ರೊಂದಿಗೆ ಹಡಗಿನ ನಡುಭಾಗ­ದಲ್ಲಿ­ದ್ದೇನೆ’ ಎಂಬ ಸಂದೇಶ ಕಳುಹಿಸಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT