ADVERTISEMENT

ನಿಯಮ ಉಲ್ಲಂಘನೆ: ಪಿಐಎ ಪೈಲಟ್‌ಗೆ ನೋಟಿಸ್‌

ಪಿಟಿಐ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಇಸ್ಲಾಮಾಬಾದ್‌: ವಿಮಾನದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ದ ಆರೋಪದ ಬಗ್ಗೆ ಸ್ಪಷ್ಟನೆ ನೀಡುವಂತೆ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ (ಪಿಐಎ) ವಿಮಾನದ ಕ್ಯಾಪ್ಟನ್‌ ಹಾಗೂ ಇಬ್ಬರು  ಅಧಿಕಾರಿಗಳಿಗೆ ನೋಟಿಸ್‌ ನೀಡಿದೆ.
 
ಜನವರಿಯಲ್ಲಿ ಪಾಕ್‌ನಿಂದ ಸೌದಿ ಅರೇಬಿಯಕ್ಕೆ ಪ್ರಯಾಣಿಸುತ್ತಿದ್ದ ವಿಮಾನವೊಂದರಲ್ಲಿ ನಿಗದಿತ ಪ್ರಮಾಣಕ್ಕಿಂತ ಏಳು ಮಂದಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ, ಮತ್ತು ಆ ಏಳು ಮಂದಿ 3 ಗಂಟೆಗೂ ಹೆಚ್ಚು ಕಾಲ ನಿಂತುಕೊಂಡೇ ಪ್ರಯಾಣ ಮಾಡಿದ್ದರು ಎಂದು ‘ಡಾನ್‌’ ಪತ್ರಿಕೆ ವರದಿ ಮಾಡಿತ್ತು.
 
‘ಪತ್ರಿಕಾ ವರದಿಯ ಆಧಾರದಲ್ಲಿ ಪಿಕೆ–743 ವಿಮಾನದ ಕ್ಯಾಪ್ಟನ್‌ ಅನ್ವರ್‌ ಅದಿಲ್‌, ಹಿರಿಯ ವಿಮಾನ ಪರಿಚಾರಕಿ ಹೀನಾ ತುರ್ಬಾ ಹಾಗೂ ಟರ್ಮಿನಲ್‌ ವ್ಯವಸ್ಥಾಪಕ ಅಕ್ಬರ್‌ ಅಲಿ ಅವರಿಗೆ ನೋಟಿಸ್‌ ನೀಡಲಾಗಿದೆ’ ಎಂದು ಸಂಸ್ಥೆಯ ವಕ್ತಾರ ದನ್ಯಾಲ್‌ ಗಿಲಾನಿ ತಿಳಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸಹಿಸಲಾಗದು’ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.