ADVERTISEMENT

ನ್ಯಾಟೊಯೇತರ ಮೈತ್ರಿ ಸ್ಥಾನಕ್ಕೆ ಕುತ್ತು

ಉಗ್ರರಿಗೆ ಆಶ್ರಯ ನೀಡುತ್ತಿರುವ ಆರೋಪ

ಪಿಟಿಐ
Published 23 ಆಗಸ್ಟ್ 2017, 19:30 IST
Last Updated 23 ಆಗಸ್ಟ್ 2017, 19:30 IST
ನ್ಯಾಟೊಯೇತರ ಮೈತ್ರಿ ಸ್ಥಾನಕ್ಕೆ ಕುತ್ತು
ನ್ಯಾಟೊಯೇತರ ಮೈತ್ರಿ ಸ್ಥಾನಕ್ಕೆ ಕುತ್ತು   

ವಾಷಿಂಗ್ಟನ್‌: ‘ಭಯೋತ್ಪಾದನೆ ಸಂಘಟನೆಗಳಿಗೆ ಬೆಂಬಲ ಮತ್ತು ಸುರಕ್ಷಿತ ನೆಲೆ ಒದಗಿಸುವುದನ್ನು ಮುಂದುವರಿಸಿದರೆ ಪಾಕಿಸ್ತಾನ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪ್ರಮುಖವಾಗಿ ನ್ಯಾಟೊಯೇತರ ಮೈತ್ರಿಕೂಟದ ಸ್ಥಾನಮಾನವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ’ ಎಂದು ಅಮೆರಿಕ ಬುಧವಾರ ಎಚ್ಚರಿಕೆ ನೀಡಿದೆ.

‘ಉಗ್ರರಿಗೆ ಬೆಂಬಲ ನೀಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಟ್ರಂಪ್‌ ಆಡಳಿತ ಈ ಬಾರಿ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ನಿಶ್ಚಿತ’ ಎಂದು ರಕ್ಷಣಾ ಕಾರ್ಯದರ್ಶಿ ಜೇಮ್ಸ್‌ ಮ್ಯಾಟಿಸ್‌ ಬುಧವಾರ ತಿಳಿಸಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ಸೇನಾ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ನ್ಯಾಟೊ ಮಹಾಪ್ರಧಾನ ಕಾರ್ಯದರ್ಶಿ ಮತ್ತು ಮೈತ್ರಿ ರಾಷ್ಟ್ರಗಳ ಜತೆ ಸಂಪರ್ಕದಲ್ಲಿದ್ದೇವೆ. ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಲು ಅಫ್ಘನ್‌ ಭದ್ರತಾ ಪಡೆಗಳಿಗೆ ನೆರವು ನೀಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ವಿದೇಶಾಂಗ ಕಾರ್ಯದರ್ಶಿ ರೆಕ್ಸ್‌ ಟಿಲ್ಲರ್‌ಸನ್‌ ಅವರು ಕೂಡ ಜೇಮ್ಸ್‌ ಮ್ಯಾಟಿಸ್‌ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

‘ಪಾಕಿಸ್ತಾನಕ್ಕೆ ನೀಡಿರುವ ನ್ಯಾಟೋಯೇತರ ಮೈತ್ರಿಕೂಟದ ಸ್ಥಾನಮಾನ ಈಗ ಪ್ರಶ್ನಾರ್ಹವಾಗಿದೆ’ ಎಂದಿದ್ದಾರೆ.

‘ಭದ್ರತೆ ದೃಷ್ಟಿಯಿಂದ ಮತ್ತು ನಾಗರಿಕರ ಹಿತಾಸಕ್ತಿಗಾಗಿ ಪಾಕಿಸ್ತಾನ ಸರ್ಕಾರ ಈಗ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಪಾಕಿಸ್ತಾನದಲ್ಲಿರುವ ತಾಲಿಬಾನ್‌ ಮತ್ತು ಇತರ ಸಂಘಟನೆಗಳು ಬಲಿಷ್ಠವಾಗುತ್ತಿವೆ. ಈ ಸಂಘಟನೆಗಳ ಅಸ್ತಿತ್ವವೇ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಸ್ಥಿರತೆಗೂ ಧಕ್ಕೆಯಾಗಲಿದೆ. ಟ್ರಂಪ್‌ ಆಡಳಿತ ಷರತ್ತು ಆಧಾರಿತ ರಾಜತಾಂತ್ರಿಕ ನೀತಿಯನ್ನು ಅನುಸರಿಸುತ್ತಿದೆ’ ಎಂದು ಹೇಳಿದರು.

‘ಈ ಹಿಂದೆ  ಪಾಕ್‌ ಮತ್ತು ಅಮೆರಿಕ ನಡುವೆ ಉತ್ತಮ ಸಂಬಂಧವಿತ್ತು. ಆದರೆ, ಹಲವು ವರ್ಷಗಳಿಂದ ಈ ಸಂಬಂಧ ಹಳಸುತ್ತಾ ಬಂದಿದೆ. ಉಭಯ ರಾಷ್ಟ್ರಗಳು ನಡುವಣ ವಿಶ್ವಾಸಕ್ಕೆ ಧಕ್ಕೆಯಾಗಿದೆ’ ಎಂದು ತಿಳಿಸಿದರು.

ಅಧಿಕಾರಿಗಳ ಮೇಲೆ ನಿರ್ಬಂಧ: 

ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಅಧಿಕಾರಿಗಳ ಮೇಲೆ ಅಮೆರಿಕ ನಿರ್ಬಂಧ ಹೇರುವ ಸಾಧ್ಯತೆ ಇದೆ.

‘ಪಾಕಿಸ್ತಾನದ ಜತೆಗಿನ ಸಂಬಂಧ ಇನ್ನು ಮುಂದೆ ಮೊದಲಿನಂತೆ ಇರುವುದಿಲ್ಲ. ಪಾಕಿಸ್ತಾನದ ಮೇಲೆ ನಿಗಾ ಇರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ಧೋರಣೆಗೆ ಸಂಬಂಧಿಸಿದಂತೆ ಅಮೆರಿಕ ಇದುವರೆಗೆ ಬಹಳ ತಾಳ್ಮೆ ವಹಿಸಿದೆ. ಆದರೆ, ಪಾಕಿಸ್ತಾನ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಖ್ಖಾನಿ ಭಯೋತ್ಪಾದನೆ ಸಂಘಟನೆ ಪಾಕಿಸ್ತಾನಿ ಸರ್ಕಾರದಲ್ಲಿನ ಕೆಲವರ ಜತೆ ಸಂಪರ್ಕ ಹೊಂದಿದೆ. ಹೀಗಾಗಿ ಹಖ್ಖಾನಿ ಹಾಗೂ ಇತರ ಭಯೋತ್ಪಾದನೆ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಪಾಕಿಸ್ತಾನದ ಅಧಿಕಾರಿಗಳ ಮೇಲೆಯೂ ನಿರ್ಬಂಧ ಹೇರಲಾಗುವುದು’  ಎಂದಿದ್ದಾರೆ.

ಪಾಕಿಸ್ತಾನದಿಂದ ನಂಬಿಕೆ ದ್ರೋಹ: 

ಪಾಕಿಸ್ತಾನವನ್ನು ಭಯೋತ್ಪಾದನೆ ಪ್ರಾಯೋಜಿಸುತ್ತಿರುವ ರಾಷ್ಟ್ರ ಎಂದು ಘೋಷಿಸಿ ಅದಕ್ಕೆ ನೀಡುತ್ತಿರುವ ಎಲ್ಲ ನೆರವು ಕಡಿತಗೊಳಿಸಬೇಕು ಹಾಗೂ ನ್ಯಾಟೊ ಮೈತ್ರಿಕೂಟದಲ್ಲಿ ನೀಡಿರುವ ಸ್ಥಾನಮಾನವನ್ನು ವಾಪಸ್‌ ಪಡೆಯಬೇಕು ಎಂದು ಅಮೆರಿಕದ ಹಿರಿಯ ಸಂಸದರು ಒತ್ತಾಯಿಸಿದ್ದಾರೆ.

‘ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ವಿರುದ್ಧ  ಇಂತಹ ಕಠಿಣ ಕ್ರಮಗಳು ಅನಿವಾರ್ಯ. ಇಂತಹ ಕ್ರಮಗಳಿಂದ ಉಗ್ರರಿಗೆ ನೆರವು ನೀಡುವುದನ್ನು ಸ್ಥಗಿತಗೊಳಿಸಬಹುದು’ ಎಂದು ಸಂಸದ ಟೆಡ್‌ ಪೋ, ಕೆವಿನ್‌ ಕ್ರ್ಯಾಮರ್‌ ಅಭಿಪ್ರಾಯಪಟ್ಟಿದ್ದಾರೆ.

‘ಅಮೆರಿಕದಿಂದ ಕೋಟ್ಯಂತರ ರೂಪಾಯಿ ಆರ್ಥಿಕ ನೆರವು ಪಡೆಯುತ್ತಿರುವ ಪಾಕಿಸ್ತಾನ ನಂಬಿಕೆ ದ್ರೋಹ ಮಾಡುತ್ತಿದೆ’ ಎಂದು ಅವರು ಕಿಡಿಕಾರಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಪಾಕಿಸ್ತಾನ ವಿರುದ್ಧ ಅನುಸರಿಸಿರುವ ಕಠಿಣ ಕ್ರಮಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಗೌರವದಿಂದ ನಡೆಸಿಕೊಳ್ಳಿ: ಪಾಕ್‌

ಇಸ್ಲಾಮಾಬಾದ್‌: ‘ಅಮೆರಿಕದಿಂದ ಪಾಕಿಸ್ತಾನವು ಹಣಕಾಸಿನ ಅಥವಾ ಮಿಲಿಟರಿ ನೆರವು ಕೋರುತ್ತಿಲ್ಲ. ಆದರೆ, ವಿಶ್ವಾಸ ಮತ್ತು ಗೌರವದಿಂದ ನಡೆಸಿಕೊಳ್ಳಬೇಕು’ ಎಂದು ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಜ್ವಾ ಪ್ರತಿಕ್ರಿಯಿಸಿದ್ದಾರೆ.

ರಾವಲ್ಪಿಂಡಿಯ ಸೇನಾ ಮುಖ್ಯ ಕಚೇರಿಯಲ್ಲಿ ಬುಧವಾರ ಅಮೆರಿಕದ ರಾಯಭಾರಿ ಡೇವಿಡ್‌ ಹ್ಯಾಲೆ ಅವರ ಜತೆ ಮಾತುಕತೆ ನಡೆಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ಶಾಂತಿ ನೆಲೆಸಲು ಪಾಕಿಸ್ತಾನ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳು ರಾಷ್ಟ್ರದ ಹಿತಾಸಕ್ತಿ ಮತ್ತು ನೀತಿಗೆ ಅನುಸಾರವಾಗಿಯೇ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಕಾರ್ಯಾಚರಣೆಗೆ ನೆರವು: ವಿಶ್ವಸಂಸ್ಥೆ

ವಿಶ್ವಸಂಸ್ಥೆ (ಪಿಟಿಐ):  ಪಾಕಿಸ್ತಾನ ಬಯಸಿದರೆ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕಾರ್ಯಾಚರಣೆಗೆ ನೆರವು ನೀಡಲು ಸಿದ್ಧ ಎಂದು ವಿಶ್ವಸಂಸ್ಥೆ ತಿಳಿಸಿದೆ.

* ಪಾಕ್‌ಗೆ ನೀಡುತ್ತಿರುವ ಆರ್ಥಿಕ ಮತ್ತು ಮಿಲಿಟರಿ ನೆರವು ಕುರಿತು ಚರ್ಚಿಸಲಾಗುತ್ತಿದೆ. ಈ ವಿಷಯಗಳ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು.

–ರೆಕ್ಸ್‌ ಟಿಲ್ಲರ್‌ಸನ್‌, ವಿದೇಶಾಂಗ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.