ADVERTISEMENT

ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿಗೆ ಅಮೆರಿಕ ಸಿದ್ಧತೆ

ಏಜೆನ್ಸೀಸ್
Published 21 ಜೂನ್ 2017, 3:56 IST
Last Updated 21 ಜೂನ್ 2017, 3:56 IST
ಅಡಂ ಸ್ಟಂಪ್‌
ಅಡಂ ಸ್ಟಂಪ್‌   

ವಾಷಿಂಗ್ಟನ್‌: ಪಾಕಿಸ್ತಾನದಲ್ಲಿರುವ  ಉಗ್ರರ ಸುರಕ್ಷತಾ ನೆಲೆಗಳನ್ನು ನಾಶಪಡಿಸಲು ಅಮೆರಿಕ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ.

ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಧೋರಣೆ ವಿರುದ್ಧ  ಅಮೆರಿಕ ಕಠಿಣ ನಿಲುವು ತಳೆದಿದೆ. ಹೀಗಾಗಿ ಉಗ್ರರ ನೆಲೆಗಳ ಮೇಲೆ ‘ಡ್ರೋನ್‌’ ಮೂಲಕ ದಾಳಿ  ನಡೆಸಲು ಮತ್ತು ಪಾಕಿಸ್ತಾನಕ್ಕೆ ನೀಡುತ್ತಿರುವ ಆರ್ಥಿಕ ನೆರವು ತಡೆಹಿಡಿಯಲು ಅಮೆರಿಕ  ಗಂಭೀರವಾಗಿ ಚಿಂತನೆ ನಡೆಸಿದೆ.

ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು ಕಠಿಣ ಕ್ರಮಕೈಗೊಳ್ಳುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೆಲವು ಅಧಿಕಾರಿಗಳು ಈ ವಿಷಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಹಿಂದೆಯೂ ಸಹ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ಹತ್ತಿಕ್ಕಲು ಅಮೆರಿಕ ನಡೆಸಿದ ಪ್ರಯತ್ನ ವಿಫಲವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಜತೆಗಿನ ಸಹಕಾರ ಮುಂದುವರಿಯುವ ಅಗತ್ಯವಿದೆ. ಆ ದೇಶದ ಜತೆಗಿನ  ಸಂಬಂಧದಲ್ಲಿ ಬಿರುಕು ಉಂಟಾಗಬಾರದು ಎಂದು  ಅಭಿಪ್ರಾಯಪಟ್ಟಿದ್ದಾರೆ.

‘ಅಮೆರಿಕ ಪ್ರಸ್ತುತ ಕೈಗೊಂಡಿರುವ ನಿಲುವುಗಳಿಂದ ಪಾಕಿಸ್ತಾನ ತನ್ನ ಧೋರಣೆ ಬದಲಾಯಿಸಿಕೊಳ್ಳಬಹುದು. ಆದರೆ, ಅಂತಿಮವಾಗಿ ಅಮೆರಿಕಕ್ಕೆ ಸ್ನೇಹಿತರು ಬೇಕಾಗುತ್ತಾರೆ. ಹೀಗಾಗಿ ಪಾಕಿಸ್ತಾನದ ಜತೆ ಸಂಬಂಧ ಕಡಿದುಕೊಳ್ಳುವುದಿಲ್ಲ’ ಎಂದು  ತಿಳಿಸಿದ್ದಾರೆ.

‘ಪಾಕಿಸ್ತಾನದ ವಿರುದ್ಧ ಅಮೆರಿಕ ಕಠಿಣ ನಿಲುವು ಕೈಗೊಳ್ಳುವ ಸಾಧ್ಯತೆಗಳು ಕಡಿಮೆ. ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಸಾರಿರುವ ಸಮರವನ್ನು ಅಮೆರಿಕ ತಡೆಯುವುದಿಲ್ಲ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಸದ್ಯದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಪಾಕ್‌ಗೆ ₹2130 ಶತಕೋಟಿ ನೆರವು
2002ರಿಂದ ಈಚೆಗೆ ಪಾಕಿಸ್ತಾನಕ್ಕೆ ಅಮೆರಿಕ ₹2130 ಶತಕೋಟಿ ಆರ್ಥಿಕ ನೆರವು ನೀಡಿದೆ. ಇದರಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗೆ ನೀಡಿರುವ ನೆರವೂ ಸೇರಿದೆ.

ಕಳೆದ ವರ್ಷ ಹಖ್ಖಾನಿ ಉಗ್ರಗಾಮಿ ಸಂಘಟನೆ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುತ್ತಿರುವ ಬಗ್ಗೆ ಪಾಕಿಸ್ತಾನ ಅಧಿಕೃತ ಪತ್ರ ನೀಡದ ಕಾರಣ ಅಮೆರಿಕ ₹1930 ಕೋಟಿ ಮೊತ್ತವನ್ನು ಕಡಿತಗೊಳಿಸಿತ್ತು. ಇದೇ ರೀತಿ ಮತ್ತೊಮ್ಮೆ ಆರ್ಥಿಕ ನೆರವು ಕಡಿತಗೊಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.