ADVERTISEMENT

ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ ಭಾರತ: ಅಮೆರಿಕ ಗುಪ್ತಚರ ದಳ ಹೇಳಿಕೆ

ಪಿಟಿಐ
Published 24 ಮೇ 2017, 10:13 IST
Last Updated 24 ಮೇ 2017, 10:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಮೂಲೆಗುಂಪು ಮಾಡಲು ಮತ್ತು ಆ ರಾಷ್ಟ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತ ಮುಂದಾಗಿದೆ ಎಂದು ಅಮೆರಿಕದ ಗುಪ್ತಚರ ದಳದ ಮುಖ್ಯಸ್ಥ ಲೆ. ಜನರಲ್ ವಿನ್ಸೆಂಟ್‌ ಸ್ಟಿವಾರ್ಟ್‌ ಹೇಳಿದ್ದಾರೆ.

ಅಮೆರಿಕದ ಸಂಸದರನ್ನೊಳಗೊಂಡ ಸಶಸ್ತ್ರ ಸೇವಾ ಸಮಿತಿಯ ಸದಸ್ಯರನ್ನು ಉದ್ದೇಶಿಸಿ, ಜಗತ್ತು ಪ್ರಸ್ತುತ ಎದುರಿಸುತ್ತಿರುವ ಭೀತಿಗೆ ಸಂಬಂಧಿಸಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ಇರುವ ಪಾಕಿಸ್ತಾನದ ಸೇನಾ ಚೌಕಿಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಗ್ಗೆ ವಿಡಿಯೊ ಬಿಡುಗಡೆ ಮಾಡಿದ ಬೆನ್ನಲ್ಲೇ ಅವರಿಂದ ಈ ಹೇಳಿಕೆ ಮೂಡಿಬಂದಿದೆ.

ಗಡಿ ವಿಚಾರಕ್ಕೆ ಸಂಬಂಧಿಸಿ ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವ ಸಲುವಾಗಿ ಭಾರತವು ಸೇನೆಯನ್ನು ಆಧುನೀಕರಣಗೊಳಿಸುತ್ತಿದೆ. ರಾಜತಾಂತ್ರಿಕ ಮತ್ತು ಆರ್ಥಿಕವಾಗಿ ಏಷ್ಯಾ ಪ್ರದೇಶದಲ್ಲಿ ಅಸ್ತಿತ್ವ ಗಟ್ಟಿಗೊಳಿಸುವುದು ಭಾರತದ ಉದ್ದೇಶವಾಗಿದೆ ಎಂದು ವಿನ್ಸೆಂಟ್ ಹೇಳಿದ್ದಾರೆ.

ADVERTISEMENT

‘ಭಾರತದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳು, ಕಾಶ್ಮೀರದಲ್ಲಿನ ಹಿಂಸಾಚಾರಗಳಿಂದಾಗಿ 2017ರಲ್ಲಿ ಭಾರತ–ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಬಾಂಧವ್ಯ ತೀರಾ ಹಳಸಿದೆ’ ಎಂದೂ ಅವರು ಹೇಳಿದ್ದಾರೆ.

ಕಾಶ್ಮೀರದಲ್ಲಿರುವ ಸೇನಾ ನೆಲೆಯ ಮೇಲೆ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಗಡಿನಿಯಂತ್ರಣ ರೇಖೆ ಬಳಿ ಉಗ್ರ ನಿಗ್ರಹಕ್ಕೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿತ್ತು. 2016ರಲ್ಲಿ ಎರಡೂ ರಾಷ್ಟ್ರಗಳ ಸೇನೆ ನಡುವೆ ಭಾರಿ ಚಕಮಕಿ ನಡೆದಿತ್ತು.  ಇದರಿಂದ ರಾಜತಾಂತ್ರಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿತ್ತು ಎಂದು ವಿನ್ಸೆಂಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.