ADVERTISEMENT

ಪಾಕ್‌ನಲ್ಲಿ ಭಾರತೀಯ ಚಿತ್ರ ಪ್ರದರ್ಶನ ಬೇಡ

ಪಿಟಿಐ
Published 24 ಸೆಪ್ಟೆಂಬರ್ 2016, 19:30 IST
Last Updated 24 ಸೆಪ್ಟೆಂಬರ್ 2016, 19:30 IST

ಲಾಹೋರ್‌ (ಪಿಟಿಐ):  ಕಾಶ್ಮೀರ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವವರೆಗೂ ಪಾಕಿಸ್ತಾನದಲ್ಲಿ ಭಾರತದ ಚಲನಚಿತ್ರಗಳ ಪ್ರದರ್ಶನಕ್ಕೆ ನಿಷೇಧ ಹೇರಬೇಕು ಎಂದು ಕೋರಿ ಇಲ್ಲಿನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ವಕೀಲ ಅಜರ್‌ ಸಿದ್ಧಿಕಿ ಎಂಬುವವರು ಈ ಅರ್ಜಿ ಸಲ್ಲಿಸಿದ್ದಾರೆ.

ಭಾರತದ ಪಡೆಗಳು ಕಾಶ್ಮೀರದಲ್ಲಿ ನಿರಂತರವಾಗಿ ದೌರ್ಜನ್ಯವೆಸಗುತ್ತಿವೆ. ಆದರೆ, ಪಾಕಿಸ್ತಾನ ಸರ್ಕಾರ ಭಾರತದ ಚಲನಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಇದರಿಂದ ಕಾಶ್ಮೀರಿಗಳು ಹಾಗೂ ಪಾಕಿಸ್ತಾನೀಯರ ಭಾವನೆಗಳಿಗೂ ಧಕ್ಕೆ ಉಂಟಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಭಾರತದ ಚಲನಚಿತ್ರಗಳು ಕಾಶ್ಮೀರ ಕುರಿತ ಪಾಕಿಸ್ತಾನದ ನೀತಿಯನ್ನು ಟೀಕಿಸಿವೆ. ಕಾಶ್ಮೀರ ನಾಗರಿಕರ ಸ್ವಾತಂತ್ರ್ಯ ಆಂದೋಲನಕ್ಕೆ ಅಡ್ಡಿಯುಂಟು  ಮಾಡಿವೆ ಎಂದೂ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಕಾಶ್ಮೀರ ಜನರ ಹೋರಾಟಕ್ಕೆ ಬೆಂಬಲ ಸೂಚಿಸಲು ಬಯಸುವುದಾದರೆ ಪಾಕಿಸ್ತಾನ ಸರ್ಕಾರ ಈ ಕೂಡಲೇ ದೇಶದಾದ್ಯಂತ ಭಾರತದ ಚಲನಚಿತ್ರಗಳ ಪ್ರದರ್ಶನದ ಮೇಲೆ ನಿಷೇಧ ಹೇರಬೇಕು ಎಂದು ಮನವಿ ಮಾಡಿದ್ದಾರೆ.

ಮತಯಂತ್ರಕ್ಕೂ ವಿರೋಧ: ಭಾರತದ ಕಂಪೆನಿಗಳಿಂದ ವಿದ್ಯುನ್ಮಾನ ಮತ ಯಂತ್ರಗಳನ್ನು ಖರೀದಿಸಬಾರದು ಎಂದು ಪಾಕಿಸ್ತಾನ ಚುನಾವಣಾ ಆಯೋಗಕ್ಕೆ ಆದೇಶಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು  ಇಲ್ಲಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಭದ್ರತೆಯ ದೃಷ್ಟಿಯಿಂದ ಭಾರತದ ಕಂಪೆನಿಗಳಿಂದ ಮತ ಯಂತ್ರಗಳನ್ನು ಖರೀದಿಸಬಾರದು ಎಂದು ವಕೀಲ ಅಜರ್‌ ಸಿದ್ಧಿಕಿ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮುಂದಿನ ವಾರಕ್ಕೆ ಮುಂದೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯೋಗವು ಇದುವರೆಗೆ ಭಾರತದ ಯಾವುದೇ ಕಂಪೆನಿಯನ್ನು ಅಂತಿಮಗೊಳಿಸಿಲ್ಲ. ಭದ್ರತೆಗೆ ಸಂಬಂಧಿಸಿದಂತೆ ಎಲ್ಲ ಅಂಶಗಳನ್ನು ಪರಿಶೀಲಿಸಿದ ನಂತರವೇ ವಿದ್ಯುನ್ಮಾನ ಯಂತ್ರಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.