ADVERTISEMENT

ಪಾಕ್‌ನಿಂದ ಸೈಬರ್‌ ದಾಳಿ ಸಂಭವ

ಅಮೆರಿಕದ ಗುಪ್ತಚರ ಕಂಪೆನಿ ವರದಿಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಪಾಕ್‌ನಿಂದ ಸೈಬರ್‌ ದಾಳಿ ಸಂಭವ
ಪಾಕ್‌ನಿಂದ ಸೈಬರ್‌ ದಾಳಿ ಸಂಭವ   

ವಾಷಿಂಗ್ಟನ್‌ (ಪಿಟಿಐ): ಕ್ರಿಕೆಟ್‌ ಹಾಗೂ ಸ್ವಾತಂತ್ರ್ಯೋತ್ಸವದಂತಹ ಬೃಹತ್‌ ಕಾರ್ಯಕ್ರಮಗಳ ವೇಳೆ ಪಾಕಿಸ್ತಾನವು ಭಾರತದ ಮೇಲೆ ಸೈಬರ್‌ ದಾಳಿ ನಡೆಸುವ ಅಪಾಯವಿದೆ ಎಂದು ಅಮೆರಿಕದ ಗುಪ್ತಚರ ಕಂಪೆನಿಯೊಂದು ಸಂಸತ್ತಿಗೆ ಮಾಹಿತಿ ನೀಡಿದೆ.

ಎರಡು ರಾಷ್ಟ್ರಗಳ ಪೈಪೋಟಿಯ ಕಾರಣ ಪಾಕಿಸ್ತಾನವು ಭಾರತದ ಸೈಬರ್‌ ವ್ಯವಸ್ಥೆಯನ್ನು ಹ್ಯಾಕ್‌ ಮಾಡಲು ಸಂಚು ರೂಪಿಸಿದ್ದು, ಭಾರತದ ಪ್ರಮುಖ ವೆಬ್‌ಸೈಟ್‌ಗಳಿಗೂ ಈ ಅಪಾಯ ತಪ್ಪಿದ್ದಲ್ಲ ಎಂದು ಕೇಂದ್ರೀಯ ಗುಪ್ತಚರ ದಳ(ಸಿಐಎ) ಬೆಂಬಲಿತ, ಬಾಸ್ಟನ್‌ ಮೂಲದ ‘ರೆಕಾರ್ಡೆಡ್‌ ಫ್ಯೂಚರ್‌’ ಎಂಬ ಕಂಪೆನಿ ಹೇಳಿದೆ.

ಭಾರತದಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಕ್ರಿಕೆಟ್‌ ವೇಳೆ ಸಂಕೇತಗಳನ್ನು ಕೆಡಿಸುವ ಮತ್ತು ಹೆಚ್ಚು ಸಂಘಟಿತವಾದ ಸೈಬರ್‌ ದಾಳಿ ನಡೆಸುವ  ಸಂಭವವಿದೆ ಎಂದು ಅದು ವಿವರಿಸಿದೆ.

‘ದಾಳಿಕೋರ’ ಪಿಸಿಎ: ವರದಿಯಲ್ಲಿ, ಪಾಕಿಸ್ತಾನದ ಸೈಬರ್‌ ಆರ್ಮಿ (ಪಿಸಿಎ) ಚಟುವಟಿಕೆಗಳನ್ನು ಪ್ರಸ್ತಾಪಿಸಲಾಗಿದೆ.

2007ರಲ್ಲಿ ನಡೆದ ಹ್ಯಾಕಿಂಗ್‌ ನಂತರ ಪಿಸಿಎ ಅತ್ಯಂತ ಕ್ರಿಯಾಶೀಲವಾಗಿದೆ. ಸಂಕೇತಗಳನ್ನು ಕಸಡಿಸುವುದು ಮತ್ತು ಭಾರತದ ಪ್ರಮುಖ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸುವಲ್ಲಿ ಅದು ತೊಡಗಿಸಿಕೊಂಡಿದೆ. ಭಾರತದ ಸರ್ಕಾರಿ ಮತ್ತು ಖಾಸಗಿ ವೆಬ್‌ಸೈಟ್‌ಗಳು ಅದರ ಪ್ರಮುಖ ಗುರಿ.

ಭಾರತೀಯ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ, ಭಾರತೀಯ ರೈಲ್ವೆ, ಸಿಬಿಐ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಕೇರಳ ರಾಜ್ಯ ಸರ್ಕಾರದ ವೆಬ್‌ಸೈಟ್‌ಗಳನ್ನು ಪಿಸಿಎ ಗುರಿಯಾಗಿಸಿಕೊಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಹ್ಯಾಕ್‌ವಿಸ್ಕ್‌: ಇಂಡಿಯಾ ವರ್ಸಸ್‌ ಪಾಕಿಸ್ತಾನ’ ಎಂಬ ಅಧ್ಯಯನ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ ನಂತರ, ಅದರ ಸಹಲೇಖಕ ನಾಗರಾಜ್‌ ಶೇಷಾದ್ರಿ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ‘ರಾಷ್ಟ್ರೀಯತಾವಾದಿ ಹ್ಯಾಕರ್‌ ಗುಂಪುಗಳು ಈ ಕೆಲಸ ಮಾಡಲಿದ್ದಾರೆ. ಸಾರ್ವಜನಿಕ ಡೊಮೈನ್‌ಗಳಿಂದ ಅವರು ಮಾಹಿತಿಗಳನ್ನು ಕಲೆಹಾಕುತ್ತಾರೆ’ ಎಂದು ಹೇಳಿದರು.

ಎರಡೂ ದೇಶಗಳ ನಡುವೆ ಸೈಬರ್‌ ಹ್ಯಾಕಿಂಗ್‌ ನಡೆಸುತ್ತಿರುವ ಜಾಲ ಎಷ್ಟು ದೊಡ್ಡದು ಎಂಬ ಬಗ್ಗೆ ನಿಖರವಾಗಿ ಹೇಳಲಾಗದು ಎಂದು ಶೇಷಾದ್ರಿ ಹೇಳಿದರು.

ಐಎಸ್‌ ಬಳಿ ರಾಸಾಯನಿಕ ಅಸ್ತ್ರ: ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ರಾಸಾಯನಿಕ ಅಸ್ತ್ರಗಳನ್ನು ಬಳಸಿದ್ದು, ಸಣ್ಣ ಪ್ರಮಾಣದಲ್ಲಿ ಕ್ಲೋರಿನ್‌ ಮತ್ತು ಸಾಸಿವೆ ಅನಿಲವನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಸಿಐಎ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ಹಣಕಾಸು ಕ್ರೋಢೀಕರಿಸಿಕೊಳ್ಳುವ ಉದ್ದೇಶಕ್ಕಾಗಿ ಐಎಸ್‌ ಸಂಘಟನೆಯು ಈ ಅಸ್ತ್ರಗಳನ್ನು ರಫ್ತು ಮಾಡುವ ಅಪಾಯವಿದೆ. ಈ ಹಿಂದೆ ಅದು ರಾಸಾಯನಿಕ ಅಸ್ತ್ರಗಳನ್ನು ಬಳಸಿದ್ದರ ಬಗ್ಗೆ ಸಾಕಷ್ಟು ಪುರಾವೆಗಳಿವೆ ಎಂದೂ ಸಿಐಎ ತಿಳಿಸಿದೆ.

ಸಾಸಿವೆ ಅನಿಲ (ಮಸ್ಟರ್ಡ್‌ ಗ್ಯಾಸ್), ಚರ್ಮಕ್ಕೆ ಸೋಂಕಿದ ತಕ್ಷಣ ಉರಿ ಮತ್ತು ಬೊಬ್ಬೆ ಹುಟ್ಟಿಸುವ ವಿಷಾನಿಲ.

ಅಲ್‌ ಕೈದಾದ ಬಗ್ಗೆ ಎಚ್ಚರಿಕೆ(ವಾಷಿಂಗ್ಟನ್‌ನಿಂದ ಪಿಟಿಐ ವರದಿ): ಅಲ್‌ ಕೈದಾ ಉಗ್ರರು ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಮತ್ತೆ ತಮ್ಮ ಕಾರ್ಯಾಚರಣೆ ಆರಂಭಿಸಬಹುದು ಎಂದು ಸಿಐಎ ಎಚ್ಚರಿಕೆ ನೀಡಿದೆ.

‘ಯುದ್ಧಪೀಡಿತ ಆಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಇತರ ಕೆಲವು ಭಯೋತ್ಪಾದನಾ ಸಂಘಟನೆಗಳಿಗೆ ಸ್ಪರ್ಧೆ ಒಡ್ಡುತ್ತಿರುವ ಕಾರಣ ಅಲ್ಲಿ ಅಲ್‌ ಕೈದಾ ಮತ್ತೆ ಕ್ರಿಯಾಶೀಲವಾಗುವ ಅಪಾಯವಿದೆ. ಹಾಗಾಗಿ ಈ ಎರಡೂ ದೇಶಗಳ ಗುಪ್ತಚರ ದಳಗಳೊಂದಿಗೆ ಅಮೆರಿಕದ ಗುಪ್ತಚರ ದಳವು ನಿರಂತರ ಸಂಪರ್ಕದಲ್ಲಿರುವುದು ಅಗತ್ಯ’ ಎಂದು ಸಿಐಎ ನಿರ್ದೇಶಕ ಜಾನ್‌ ಬ್ರೆನಾನ್‌   ಅವರು ಅಮೆರಿಕ ಸಂಸತ್ತಿನ ಗುಪ್ತಚರ ವಿಭಾಗದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT