ADVERTISEMENT

ಪಾಕ್‌ ವಿಮಾನ ಪತನ:48 ಮಂದಿ ಸಾವು?

ಅಬೋಟಾಬಾದ್‌ನ ಹವೇಲಿಯನ್‌ ಗುಡ್ಡಗಾಡು ಪ್ರದೇಶದಲ್ಲಿ ದುರಂತ

ಪಿಟಿಐ
Published 7 ಡಿಸೆಂಬರ್ 2016, 19:38 IST
Last Updated 7 ಡಿಸೆಂಬರ್ 2016, 19:38 IST
ಪಾಕ್‌ ವಿಮಾನ ಪತನ:48 ಮಂದಿ ಸಾವು?
ಪಾಕ್‌ ವಿಮಾನ ಪತನ:48 ಮಂದಿ ಸಾವು?   

ಇಸ್ಲಾಮಾಬಾದ್‌ : ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ (ಪಿಐಎ) ವಿಮಾನವೊಂದು ಬುಧವಾರ ಅಬೋಟಾಬಾದ್‌ನ ಹವೇಲಿಯನ್‌ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದೆ.

ವಿಮಾನದಲ್ಲಿದ್ದ 48 ಮಂದಿ ಪ್ರಯಾಣಿಸುತ್ತಿದ್ದರು. ಘಟನಾ ಸ್ಥಳದಲ್ಲಿ 36 ಶವಗಳು ಪತ್ತೆಯಾಗಿದ್ದು, ಉಳಿದವರು ಸಹ ಮೃತಪಟ್ಟಿರಬಹುದು ಎಂದು ನಾಗರಿಕ ವಿಮಾನಯಾನದ ಅಧಿಕಾರಿ ತಿಳಿಸಿದ್ದಾರೆ.

ಎಟಿಆರ್‌ ಪಿಕೆ–661 ವಿಮಾನ ಖೈಬರ್‌ ಪಖ್ತುಂಖ್ವಾ ಪ್ರಾಂತದ ಚಿತ್ರಾಲ್‌ನಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಮಧ್ಯಾಹ್ನ 3.30ಕ್ಕೆ ಚಿತ್ರಾಲ್‌ನಿಂದ ಹೊರಟಿದ್ದ ವಿಮಾನ ಸಂಜೆ 4.40ರ ವೇಳೆಗೆ ಇಸ್ಲಾಮಾಬಾದ್‌ನ ಬೆನಜೀರ್‌ ಭುಟ್ಟೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕಾಗಿತ್ತು ಎಂದು ಅವರ ಹೇಳಿದ್ದಾರೆ.

ವಿಮಾನ ರಾಡಾರ್‌ ಸಂಪರ್ಕದಿಂದ ಕಡಿತಗೊಳ್ಳುವ ಮೊದಲು, ತಾಂತ್ರಿಕ ದೋಷ ಉಂಟಾಗಿರುವ ಕುರಿತು  ಪೈಲಟ್‌ ವಿಮಾನ ಸಂಚಾರ ನಿಯಂತ್ರಣ ಕೇಂದ್ರಕ್ಕೆ ತಿಳಿಸಿದ್ದರು ಎಂದು ಪಿಐಎ ವಕ್ತಾರ ಡೇನಿಯಲ್‌ ಗಿಲಾನಿ ದೃಢಪಡಿಸಿದ್ದಾರೆ.

‘ವಿಮಾನದಲ್ಲಿ 9 ಮಹಿಳೆಯರು, ಇಬ್ಬರು ಮಕ್ಕಳು, ಇಬ್ಬರು ಗಗನಸಖಿಯರು ಹಾಗೂ ಮೂವರು ಪೈಲಟ್‌ಗಳು ಸೇರಿ 48 ಮಂದಿ ಇದ್ದರು’ ಎಂದು ಅವರು ತಿಳಿಸಿದ್ದಾರೆ.ವಿಮಾನದಲ್ಲಿ ಪಾಕಿಸ್ತಾನದ ಗಾಯಕ, ಧರ್ಮ ಬೋಧಕ ಜುನೇದ್‌ ಜಂಶೇಡ್‌ ಹಾಗೂ ಅವರ ಪತ್ನಿ ಸಹ ಪ್ರಯಾಣಿಸುತ್ತಿದ್ದರು.

2012ರಲ್ಲಿ ಇಸ್ಲಾಮಾಬಾದ್‌ನಲ್ಲಿ ಸಂಭವಿಸಿದ್ದ ಭೋಜಾ ಏರ್‌ಲೈನ್‌ ವಿಮಾನ ದುರಂತದಲ್ಲಿ 6 ಸಿಬ್ಬಂದಿ ಸೇರಿ 127 ಮಂದಿ ಮೃತಪಟ್ಟಿದ್ದರು. 2010ರ ಜುಲೈನಲ್ಲಿ ಏರ್‌ಬಸ್‌ 321 ಪತನಗೊಂಡು 152 ಮಂದಿ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.