ADVERTISEMENT

ಪೋರ್ಚುಗಲ್‌ ಪ್ರಧಾನಿ ಅಭ್ಯರ್ಥಿಯಾಗಿ ಭಾರತ ಮೂಲದ ಆಂಟೊನಿಯೊ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ಲಂಡನ್ (ಪಿಟಿಐ): ಪೋರ್ಚುಗಲ್‌ನ ಪ್ರಧಾನಮಂತ್ರಿ ಹುದ್ದೆಗೆ 2015ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿ­ಯಾಗಿ, ಇಲ್ಲಿನ ಪ್ರಮುಖ ವಿರೋಧ ಪಕ್ಷವಾದ ಸೋಷಿ­ಯಲಿಸ್ಟ್ ಪಕ್ಷವು ಭಾರತ ಮೂಲದ ಆಂಟೊನಿಯೊ ಲೂಯಿಸ್‌ ಡಿ ಕೋಸ್ಟಾ  ಅವರನ್ನು ಆಯ್ಕೆ ಮಾಡಿದೆ.

ಪ್ರಧಾನಿ ಅಭ್ಯರ್ಥಿ ಸ್ಪರ್ಧೆಯ­ಲ್ಲಿದ್ದ, ಪಕ್ಷದ ನಾಯಕ ಆಂಟೊನಿಯೊ ಜೋಸ್ ಸಿಗುರೊ ಅವರನ್ನು ಕೋಸ್ಟಾ ಹಿಂದಿಕ್ಕಿದ್ದಾರೆ. ಸಿಗುರೊ ಅವರ ರಾಜೀ­ನಾಮೆಯ ನಂತರ ಪಕ್ಷದ ಮುಂದಾಳತ್ವ ವಹಿಸಿಕೊಂಡಿರುವ ಅವರು, ಭಾರತ ಮತ್ತು ಪೋರ್ಚು­ಗಲ್ ನಡುವಣ ಸಂಬಂಧವನ್ನು ಈ ಹಿಂದಿನಂತೆ  ‘ಅಟ್ಲಾಂಟಿಕ್‌ನ ವ್ಯಾಪಾ­ರದ ಕೇಂದ್ರ’­ವಾಗಿ ಗಟ್ಟಿಗೊಳಿಸಬೇಕು ಎಂದಿದ್ದಾರೆ. ಅಲ್ಲದೆ, ‘ಸಂಸತ್ತಿನಲ್ಲಿ ನಮ್ಮ ಬಹುಮತದ ಗೆಲುವಿನ  ಹಾದಿಯಲ್ಲಿ ಇದು ಮೊದಲ ದಿನ’  ಎಂದೂ ಕೋಸ್ಟಾ ಹೇಳಿದ್ದಾರೆ.

ಲಿಸ್ಬನ್‌ನ ಮೇಯರ್‌ ಆಗಿರುವ 52ರ ಕೋಸ್ಟಾ, ತಮ್ಮ ಸರಳ ಜೀವನದ  ಮೂಲಕ ‘ಲಿಸ್ಬನ್‌ನ ಗಾಂಧಿ’ ಎಂದೇ  ಹೆಸರಾಗಿದ್ದಾರೆ.
ಇದಕ್ಕೂ ಮುನ್ನ, ಹಿಂದಿನ ಸೋಷಿಯಲಿಸ್ಟ್ ಸರ್ಕಾರದಲ್ಲಿ ನ್ಯಾಯಾಂಗ ಮತ್ತು ಒಳಾಡಳಿತ ಸಚಿವ­ರಾಗಿ ಅವರು ಕಾರ್ಯ ನಿರ್ವಹಿಸಿದ್ದರು.

ಆಂಟೊನಿಯೊ ಅವರ ಪೂರ್ವಿಕರು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ ಕೊಂಕಣಿ) ಸಮುದಾಯಕ್ಕೆ ಸೇರಿದವರು. ಗೋವಾದಲ್ಲಿ ಪೋರ್ಚುಗೀಸರ ಆಡಳಿತ ಕಾಲದಲ್ಲಿ ಅವರ ವಂಶಸ್ಥರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಕೋಸ್ಟಾ ಅವರ ತಾತ ಲೂಯಿಸ್‌ ಅಫೋನ್ಸೊ ಮಾರಿಯಾ ದ ಕೋಸ್ಟಾ ಪೋರ್ಚುಗೀಸ್‌ ವಸಾಹತಾಗಿದ್ದ ಗೋವಾದಲ್ಲಿ ಬದುಕಿದವರು. ಆ್ಯಂಟೊನಿಯೊ ಅವರ ತಂದೆ ಒರ್ಲಾಂಡೊ ಡ ಕೋಸ್ಟಾ  ಅವರು ರವೀಂದ್ರನಾಥ ಠ್ಯಾಗೋರ್ ಕುರಿತು ಹಲವು ಪ್ರಬಂಧಗಳನ್ನು ಬರೆದಿದ್ದಾರೆ . ತಮ್ಮ ಜೀವನದ ಬಹುಭಾಗವನ್ನು ಅವರು ಗೋವಾದಲ್ಲಿಯೇ ಕಳೆದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.