ADVERTISEMENT

‘ಪ್ರತ್ಯೇಕ ಬಲೂಚಿಸ್ತಾನಕ್ಕೆ ಜನಮತಗಣನೆ ನಡೆಯಲಿ’

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST

ವಾಷಿಂಗ್ಟನ್‌ (ಪಿಟಿಐ): ಪಾಕಿಸ್ತಾನದ ಪಡೆಗಳು ಬಲೂಚಿಸ್ತಾನದಲ್ಲಿ ಸುನಾಮಿಯಂತೆ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತೀವೆ ಎಂದು ಬಲೂಚ್‌ನ ಪ್ರಮುಖ ನಾಯಕ ಬ್ರಹುಮ್ಡಗ್‌ ಬುಕ್ತಿ ಆರೋಪ ಮಾಡಿದ್ದಾರೆ.

ಬಲೂಚ್‌ ರಾಷ್ಟ್ರೀಯ ಚಳವಳಿಗೆ ಭಾರತವೂ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯವು ಸಹಕಾರ ನೀಡಬೇಕು ಎಂದು ಬಲೂಚ್‌ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಬುಗ್ತಿ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಬಲೂಚಿಸ್ತಾನದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

‘ಪಾಕಿಸ್ತಾನದೊಂದಿಗೆ ಇನ್ನು ಹೆಚ್ಚು ಕಾಲ ಇರಲು ನಾವು ಬಯಸುವುದಿಲ್ಲ. ಬಲೂಚಿಸ್ತಾನದ ಪ್ರತ್ಯೇಕತೆಯ ಬಗ್ಗೆ ವಿಶ್ವಸಂಸ್ಥೆ ಮೇಲ್ವಿಚಾರಣೆಯಲ್ಲಿ ಜನಮತಗಣನೆ ನಡೆಯಲಿ’ ಎಂದು ಅವರು ಒತ್ತಾಯಿಸಿದ್ದಾರೆ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸಿದ್ಧ, ಆದರೆ, ಬಲೂಚ್‌  ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

‘ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಿ’
ವಿಶ್ವಸಂಸ್ಥೆ (ಪಿಟಿಐ):
ಕಾಶ್ಮೀರ ವಿಷಯ ಸೇರಿದಂತೆ ತಮ್ಮ ನಡುವಿರುವ ಭಿನ್ನಾಭಿಪ್ರಾಯ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮುಂದುವರಿಸಬೇಕು ಎಂದು ಅಮೆರಿಕ ಸಲಹೆ ನೀಡಿದೆ.

ವಾಕ್ಚಾತುರ್ಯ ಪ್ರದರ್ಶಿಸುವುದರಿಂದ ಎರಡೂ ದೇಶಗಳ ದೂರವಿರಬೇಕು ಎಂದು  ಕರೆ ನೀಡಿದೆ. ‘ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇತರ ಮಾರ್ಗಗಳಿಗಿಂತ ಪರಸ್ಪರ ಕುಳಿತು ಚರ್ಚೆ ನಡೆಸಬೇಕು. ಇದರಿಂದ ಉತ್ತಮ ಫಲಿತಾಂಶ ಸಿಗಲಿದೆ.

ಎರಡೂ ದೇಶಗಳು ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿವೆ ಎನ್ನುವ ಭರವಸೆ ನಮಗಿದೆ’ ಎಂದು ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT