ADVERTISEMENT

ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆ: ಎಮ್ಯಾನುಯಲ್‌ ಮ್ಯಾಕ್ರನ್‌ ಮುನ್ನಡೆ

ಏಜೆನ್ಸೀಸ್
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಎಮ್ಯಾನುಯಲ್,  ಮರೈನ್‌ ಲೆ
ಎಮ್ಯಾನುಯಲ್, ಮರೈನ್‌ ಲೆ   

ಪ್ಯಾರಿಸ್‌: ಯುರೋಪ್‌ನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಮ್ಯಾನುಯಲ್ ಮ್ಯಾಕ್ರನ್‌ ಮುನ್ನಡೆ ಕಾಯ್ದುಕೊಂಡಿದ್ದು, ದೇಶದ ಅತ್ಯಂತ ಕಿರಿಯ ಅಧ್ಯಕ್ಷರಾಗಿ ದೇಶದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ.

ಮೊದಲ ಹಂತದ ಎಣಿಕೆಯಲ್ಲಿ ಮಧ್ಯಮಪಂಥೀಯ ಮುಖಂಡ ಎಮ್ಯಾನುಯಲ್‌ ಮ್ಯಾಕ್ರನ್‌ ಶೇ 23.9 ಮತ ಗಳಿಸಿದ್ದಾರೆ. ನ್ಯಾಷನಲ್‌ ಫ್ರಂಟ್‌ನ ಬಲಪಂಥೀಯ ನಾಯಕಿ ಮರೈನ್‌ ಲೆ ಪೆನ್‌ ಶೇ 21.4 ಮತ ಪಡೆದಿದ್ದಾರೆ ಎಂದು ಆಂತರಿಕ ಸಚಿವಾಲಯವು ತಿಳಿಸಿದೆ.

‘ಹಲವು ತಿಂಗಳಿನಿಂದ ಫ್ರಾನ್ಸ್‌ನ ಜನರಲ್ಲಿದ್ದ ಸಂಶಯ, ಆಕ್ರೋಶ,  ಸಿಟ್ಟು ಹಾಗೂ ಭಯವನ್ನು ಇಂದು ಮತ್ತೆ ಕಾಣುತ್ತಿದ್ದೇನೆ. ಈ ಕಾರಣಕ್ಕಾಗಿಯೇ ಅವರು ಬದಲಾವಣೆ ಬಯಸಿದ್ದಾರೆ’ ಎಂದು ಪ್ಯಾರಿಸ್‌ನಲ್ಲಿ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಎಮ್ಯಾನುಯಲ್‌ ಅವರು ಮಾತನಾಡಿದರು.

ADVERTISEMENT

‘ಫ್ರಾನ್ಸ್‌ನ ರಾಜಕೀಯದಲ್ಲಿ ಬದಲಾವಣೆ ಹಾಗೂ ದೇಶವನ್ನು ಆಧುನೀಕರಣದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ‘ದೇಶಭಕ್ತ’ರು  ಬೆಂಬಲಿಸಬೇಕು’ ಎಂದು   ಮನವಿ ಮಾಡಿದರು.

ನಿರ್ಗಮಿತ ಅಧ್ಯಕ್ಷ ಪ್ರಾಂಸ್ವಾ ಹೊಲಾಂಡೆ ಸರ್ಕಾರದಲ್ಲಿ ಆರ್ಥಿಕ ಸಚಿವರಾಗಿದ್ದ ಮ್ಯಾಕ್ರನ್‌, ಹೂಡಿಕೆ ತಜ್ಞರಾಗಿಯೂ ಅನುಭವ ಹೊಂದಿದ್ದಾರೆ.
ಮೇ 7ರಂದು ಅಂತಿಮ ಫಲಿತಾಂಶ ಪ್ರಕಟಗೊಳ್ಳಲಿದೆ. ಐರೋಪ್ಯ ಒಕ್ಕೂಟದೊಂದಿಗೆ ಫ್ರಾನ್ಸ್‌ನ ಉಳಿಯುವ  ಬಗ್ಗೆಯೂ ಚುನಾವಣಾ ಫಲಿತಾಂಶದಿಂದ ನಿರ್ಧಾರವಾಗಲಿದೆ.

ಫ್ರಾನ್ಸ್‌ನ ಅತಿ ಕಿರಿಯ ಅಧ್ಯಕ್ಷರೆನ್ನಿಸಿಕೊಳ್ಳುವ ಹಂಬಲದಲ್ಲಿರುವ  39 ವರ್ಷದ ಎಮ್ಯಾನುಯಲ್‌ ಮ್ಯಾಕ್ರನ್‌ ಅವರು ಐರೋಪ್ಯ ಒಕ್ಕೂಟ ಪರವಾದ ಮತ್ತು ವ್ಯವಹಾರದ ನೆಲೆಯನ್ನು ಬಲಪಡಿಸುವ ಆಸಕ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.