ADVERTISEMENT

ಬಾಂಗ್ಲಾಕ್ಕೆ 21ಸಾವಿರ ವಲಸಿಗರು

ಏಜೆನ್ಸೀಸ್
Published 6 ಡಿಸೆಂಬರ್ 2016, 19:30 IST
Last Updated 6 ಡಿಸೆಂಬರ್ 2016, 19:30 IST
ರೊಹಿಂಗ್ಯಾ ಮುಸಲ್ಮಾನರ ಮೇಲಿನ ದೌರ್ಜನ್ಯವನ್ನು ತಡೆಯುವಂತೆ ಒತ್ತಾಯಿಸಿ ಬಾಂಗ್ಲಾದೇಶದ ವಿವಿಧ ಇಸ್ಲಾಮಿಕ್‌ ಸಂಘ ಟನೆಗಳ ಪ್ರತಿನಿಧಿಗಳು ಢಾಕಾದಲ್ಲಿರುವ ಮ್ಯಾನ್ಮಾರ್‌ ರಾಯಭಾರಿ ಕಚೇರಿಗೆಯವರೆಗೆ ಮೆರವಣಿಗೆ ನಡೆಸಿದರು – ಎಎಫ್‌ಪಿ ಚಿತ್ರ
ರೊಹಿಂಗ್ಯಾ ಮುಸಲ್ಮಾನರ ಮೇಲಿನ ದೌರ್ಜನ್ಯವನ್ನು ತಡೆಯುವಂತೆ ಒತ್ತಾಯಿಸಿ ಬಾಂಗ್ಲಾದೇಶದ ವಿವಿಧ ಇಸ್ಲಾಮಿಕ್‌ ಸಂಘ ಟನೆಗಳ ಪ್ರತಿನಿಧಿಗಳು ಢಾಕಾದಲ್ಲಿರುವ ಮ್ಯಾನ್ಮಾರ್‌ ರಾಯಭಾರಿ ಕಚೇರಿಗೆಯವರೆಗೆ ಮೆರವಣಿಗೆ ನಡೆಸಿದರು – ಎಎಫ್‌ಪಿ ಚಿತ್ರ   

ಢಾಕಾ: ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಕಳೆದ ಕೆಲವು ವಾರಗಳಲ್ಲಿ ಮ್ಯಾನ್ಮಾರ್‌ನಿಂದ ಸುಮಾರು 21ಸಾವಿರ ರೊಹಿಂಗ್ಯಾ ಸಮುದಾಯದವರು ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದಾರೆ ಎಂದು ಅಂತರರಾಷ್ಟ್ರೀಯ ವಲಸಿಗರ ಸಂಘಟನೆ (ಐಒಎಂ) ಮಂಗಳವಾರ ಹೇಳಿದೆ.

ಕಳೆದ ಅಕ್ಟೋಬರ್‌ನಿಂದ ಮ್ಯಾನ್ಮಾರ್‌ನ ರಖಿನೆಯಲ್ಲಿ ಹಿಂಸಾಚಾರ ನಡೆಯುತ್ತಿದ್ದು, ವಲಸಿಗರು  ಪ್ರವಾಹೋಪಾದಿಯಲ್ಲಿ ದೇಶದೊಳಗೆ ಪ್ರವೇಶಿಸುವುದನ್ನು ತಡೆಯಲು ಬಾಂಗ್ಲಾದೇಶ ಗಡಿಯಲ್ಲಿ ಗಸ್ತನ್ನು ಹೆಚ್ಚಿಸಿದೆ. ಆದರೆ, ಬಾಂಗ್ಲಾ–ಮ್ಯಾನ್ಮಾರ್‌ ಗಡಿ ಕಾಕ್ಸ್‌ಬಜಾರ್‌ನಲ್ಲಿರುವ ಐಒಎಂ ಕಚೇರಿಯ ಮುಖ್ಯಸ್ಥ ಸಂಜುಕ್ತಾ ಶೆನಾಯ್‌ ಪ್ರಕಾರ, ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 21ಸಾವಿರ ಜನಾಂಗೀಯ ಅಲ್ಪಸಂಖ್ಯಾತರು ದೇಶದೊಳಗೆ ಪ್ರವೇಶಿಸಿದ್ದಾರೆ.

ಮ್ಯಾನ್ಮಾರ್‌ ಸೇನೆ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ಸಾಮೂಹಿಕ ಅತ್ಯಾಚಾರ, ದೌರ್ಜನ್ಯ ನಡೆಸುತ್ತಿದೆ ಎಂದು ಬಾಂಗ್ಲಾದ ತಾತ್ಕಾಲಿಕ ಶಿಬಿರಗಳಲ್ಲಿ ನೆಲೆಸಿರುವ ವಲಸಿಗರು ಆರೋಪಿಸಿದ್ದಾರೆ.

ರೊಹಿಂಗ್ಯಾ ಅಲ್ಪಸಂಖ್ಯಾತರು ದೇಶ ತೊರೆಯುತ್ತಿರುವುದು ಶಾಂತಿಗಾಗಿ ನೊಬೆಲ್‌ ಪ್ರಶಸ್ತಿ ಪಡೆದ, ಆಡಳಿತಾರೂಢ ಎನ್‌ಎಲ್‌ಡಿ ನಾಯಕಿ ಆಂಗ್‌ ಸಾನ್‌ ಸೂಕಿ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿನ್ನಡೆ ತಂದಿದೆ. ಶಾಂತಿ ಮತ್ತು ದೇಶದಲ್ಲಿ ಸಾಮರಸ್ಯ ಮೂಡಿಸುವುದಾಗಿ ಸೂಕಿ ಅವರು ಕಳೆದ ವಾರ ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.