ADVERTISEMENT

ಬಾಂಗ್ಲಾ ಕೆಫೆ ದಾಳಿ ಸಂಚುಕೋರನ ಹತ್ಯೆ

ಉಗ್ರರ ಅಡಗುತಾಣದ ಮೇಲೆ ಭದ್ರತಾ ಪಡೆಗಳ ದಾಳಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST
ನಾರಾಯಣಗಂಜ್‌ನಲ್ಲಿ ನಡೆದ ಉಗ್ರರ ಎನ್‌ಕೌಂಟರ್‌ ಸಂದರ್ಭ ಸ್ಥಳದಲ್ಲಿ ಭದ್ರತೆ ಒದಗಿಸಿದ ಪೊಲೀಸರು – ಎಎಫ್‌ಪಿ ಚಿತ್ರ
ನಾರಾಯಣಗಂಜ್‌ನಲ್ಲಿ ನಡೆದ ಉಗ್ರರ ಎನ್‌ಕೌಂಟರ್‌ ಸಂದರ್ಭ ಸ್ಥಳದಲ್ಲಿ ಭದ್ರತೆ ಒದಗಿಸಿದ ಪೊಲೀಸರು – ಎಎಫ್‌ಪಿ ಚಿತ್ರ   

ಢಾಕಾ (ಪಿಟಿಐ): ಇಲ್ಲಿನ ಹೋಲಿ ಆರ್ಟಿಸನ್ ಕೆಫೆಯಲ್ಲಿ ಜುಲೈ 1 ರಂದು ನಡೆದಿದ್ದ ಉಗ್ರರ ದಾಳಿಯ ಸಂಚುಕೋರ ಮತ್ತು ಇತರ ಇಬ್ಬರು ಉಗ್ರರು ಭದ್ರತಾ ಪಡೆಗಳ ಜಂಟಿ ತಂಡ ಶನಿವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.

ಕೆನಡಾ ಮೂಲದ ಬಾಂಗ್ಲಾದೇಶ ನಿವಾಸಿ ತಮೀಮ್‌ ಅಹಮ್ಮದ್‌ ಚೌಧರಿ ಮತ್ತು ಇತರ ಇಬ್ಬರು ಇಸ್ಲಾಮಿಕ್‌ ಉಗ್ರರು  ನಗರದ ಹೊರವಲಯ ದಲ್ಲಿರುವ ಕಟ್ಟಡವೊಂದರಲ್ಲಿ ಅವಿತುಕೊಂಡಿದ್ದರು.

‘ನಾರಾಯಣಗಂಜ್‌ನ ಪಿಕೆಪಾರ್ಹದಲ್ಲಿರುವ ಕಟ್ಟಡವೊಂದರಲ್ಲಿ ಉಗ್ರರು ಅವಿತುಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೆಳಿಗ್ಗೆ ಕಟ್ಟಡವನ್ನು ಸುತ್ತುವರಿದು ನಂತರ ಎನ್‌ಕೌಂಟರ್‌ ನಡೆಸಿದ್ದಾರೆ’ ಎಂದು ಉಗ್ರರ ನಿಗ್ರಹ ಪಡೆಯ ಹೆಚ್ಚುವರಿ ಸಹಾಯಕ ಆಯುಕ್ತ ಸನೋವರ್‌ ಹುಸೇನ್‌ ತಿಳಿಸಿದ್ದಾರೆ.‘ಬೆಳಿಗ್ಗೆ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ತಮೀಮ್‌ ಚೌಧರಿ ಹತನಾಗಿದ್ದಾನೆ’ ಎಂದು ಪೊಲೀಸ್‌ ಇಲಾಖೆ ವಕ್ತಾರ ಜಲಾಲುದ್ದೀನ್‌ ತಿಳಿಸಿದರು.

ಉಗ್ರರ ನಿಗ್ರಹ ಪಡೆ, ಅಂತರರಾಷ್ಟ್ರೀಯ ಅಪರಾಧ ದಳ ಮತ್ತು ಪೊಲೀಸರ ಜಂಟಿ ತಂಡ ಕಟ್ಟಡವನ್ನು ಸುತ್ತುವರಿದು ನಂತರ ದಾಳಿ ನಡೆಸಿತು’  ಎಂದು ಎಸ್ಪಿ ಹೇಳಿರುವುದನ್ನು ‘ದಿ ಡೈಲಿ ಸ್ಟಾರ್‌’ ವರದಿ ಮಾಡಿದೆ.

‘ಭದ್ರತಾ ಪಡೆಗಳು ಉಗ್ರರು ಅವಿತುಕೊಂಡಿದ್ದ ಮನೆಯೊಳಗೆ ಪ್ರವೇಶ ಮಾಡುವ ಯತ್ನ ನಡೆಸಿದರು ಆದರೆ,  ಆ ಕಡೆಯಿಂದ ಉಗ್ರರು ಗುಂಡಿನ ದಾಳಿ ನಡೆಸಿದರು’ಎಂದರು. ಕೆನಡಾದಲ್ಲಿ ನೆಲೆಸಿದ್ದ ಔಧರಿ 2013ರಲ್ಲಿ ಬಾಂಗ್ಲಾದೇಶಕ್ಕೆ ಬರುವ ಮೊದಲು ಭಯೋತ್ಪಾದನಾ ಕೃತ್ಯಕ್ಕೆ ಹಣ ಒದಗಿಸಲು ಅಂತರರಾಷ್ಟ್ರೀಯ ಮಟ್ಟದ ಜಾಲವನ್ನು ರಚಿಸಿಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.