ADVERTISEMENT

ಬಾಂಬ್‌ ಸ್ಫೋಟಕ್ಕೆ ತತ್ತರಿಸಿದ ಬದುಕು

ಸಿರಿಯಾದಲ್ಲಿ 15 ನಾಗರಿಕರು ಬಲಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST
ಸಿರಿಯಾದ ಅಲೆಪ್ಪೊ ಸಿಟಿಬಾಂಬ್‌ ದಾಳಿಯಲ್ಲಿ ಗಾಯಗೊಂಡ ಬಾಲಕಿಯೊಬ್ಬಳನ್ನು ಆಸ್ಪತ್ರೆಗೆ ಸಾಗಿಸಿದ ಯುವಕ
ಸಿರಿಯಾದ ಅಲೆಪ್ಪೊ ಸಿಟಿಬಾಂಬ್‌ ದಾಳಿಯಲ್ಲಿ ಗಾಯಗೊಂಡ ಬಾಲಕಿಯೊಬ್ಬಳನ್ನು ಆಸ್ಪತ್ರೆಗೆ ಸಾಗಿಸಿದ ಯುವಕ   

ಬೈರೂತ್‌(ಎಎಫ್‌ಪಿ): ಸಿರಿಯಾದ ಅಲೆಪ್ಪೊ ಸಿಟಿಯಲ್ಲಿ ಶನಿವಾರ ನಡೆದ ಬ್ಯಾರೆಲ್‌ ಬಾಂಬ್‌ ದಾಳಿಯಲ್ಲಿ 15ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ. ಈಶಾನ್ಯ ಅಲೆಪ್ಪೊದ ಮಾದಿ ಜಿಲ್ಲೆಯಲ್ಲಿ ವಿಮಾನದ ಮೂಲಕ ಬ್ಯಾರೆಲ್‌ ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಬ್ರಿಟನ್ ಮೂಲದ ಮಾನವ ಹಕ್ಕುಗಳ ಕಣ್ಗಾವಲು ಸಂಸ್ಥೆಯೊಂದು ತಿಳಿಸಿದೆ.

‘ನೆರೆಯ ಬಾಬ್‌ ಅಲ್‌ ನಾಯ್‌ರಬ್‌  ಜಿಲ್ಲೆಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಗುತ್ತಿತ್ತು. ಈ ವೇಳೆ ವಾಯುದಾಳಿ ನಡೆದಿದೆ’ ಎಂದು ರಾಮಿ ಅಬ್ದೆಲ್‌ ರಹಮಾನ್‌ ಹೇಳಿದ್ದಾರೆ.

‘ಮೊದಲಿಗೆ ಬ್ಯಾರೆಲ್‌ ಬಾಂಬ್ ದಾಳಿ ನಡೆಯಿತು. ಕೂಡಲೇ ಸ್ಥಳಕ್ಕೆ ಜನ ದಾವಿಸಿದರು.  ಅಂಬ್ಯುಲೆನ್ಸ್‌ ಸಹ ಬಂದವು. ಮತ್ತೊಮ್ಮೆ ಅದೇ ಸ್ಥಳದ ಮೇಲೆ ಎರಡನೇ ಬಾರಿ ಬ್ಯಾರೆಲ್‌ ಬಾಂಬ್‌ ದಾಳಿಯಾಯಿತು. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಯಿತು’ ಎಂದು ವರದಿಗಾರರೊಬ್ಬರು ತಿಳಿಸಿದ್ದಾರೆ.  ಬಾಂಬ್‌ ದಾಳಿಗೆ ಒಂದು ಅಂಬ್ಯುಲೆನ್ಸ್‌ ಸಂಪೂರ್ಣವಾಗಿ ಛಿದ್ರವಾಗಿದೆ.

ಅಲೆಪ್ಪೊ ನಗರದ ಮೇಲೆ ಪದೇ ಪದೇ ದಾಳಿ ನಡೆಯುತ್ತಿದೆ.  2011ರ ಮಾರ್ಚ್‌ನಿಂದ ಸರ್ಕಾರದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಸಿಲುಕಿರುವ ನಾಗರಿಕರು ನಲುಗಿ ಹೋಗಿದ್ದಾರೆ.

ಒತ್ತೆಯಾಳುಗಳಿಗೆ ಮಕ್ಕಳಿಂದ ಗುಂಡು– ಲಂಡನ್‌(ಪಿಟಿಐ):  ಒತ್ತೆಯಾಳುಗಳಿಗೆ ಬಾಲಕರು ಗುಂಡು ಹಾರಿಸುತ್ತಿರುವ ಭಯಾನಕ ವಿಡಿಯೊವೊಂದನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಬಿಡುಗಡೆ ಮಾಡಿದ್ದಾರೆ.

ಈ ಬಾಲಕರ ವಯಸ್ಸು 10 ರಿಂದ 13.   ಐವರು ಮಕ್ಕಳಲ್ಲಿ ಒಬ್ಬ ಬ್ರಿಟನ್‌ ಪ್ರಜೆ ಎಂಬುದು ವಿಡಿಯೊದಲ್ಲಿ ಗೊತ್ತಾ ಗುತ್ತದೆ.  ಸಿರಿಯಾದಲ್ಲಿ ಈ ವಿಡಿಯೊವನ್ನು ಚಿತ್ರೀಕರಣ ಮಾಡಲಾಗಿದೆ. ಮಂಡಿ  ಮೇಲೆ ಕುಳಿತಿರುವ ಕುರ್ದಿಸ್‌  ಹೋರಾಟಗಾರರ ಮೇಲೆ ಗುಂಡು ಹಾರಿಸುವ ದೃಶ್ಯಗಳು ಸೆರೆಯಾಗಿವೆ.

ಅಬು ಅಬ್ದುಲ್ಲಾ ಹೆಸರಿನ ಬಾಲಕನ ಹೆಸರನ್ನು ವಿಡಿಯೊದಲ್ಲಿ  ತೋರಿಸ ಲಾಗಿದೆ. ಗುಂಡು ಹಾರಿಸುತ್ತಿರುವ ಮಕ್ಕಳು ಸೇನಾ ಸಮವಸ್ತ್ರ ಧರಿಸಿದ್ದು, ಕಪ್ಪು ಟೋಪಿ ಹೊಂದಿದ್ದಾರೆ.

‘ಅಮೆರಿಕ, ಫ್ರಾನ್ಸ್, ಬ್ರಿಟನ್‌, ಜರ್ಮನಿಯ ಯಾವುದೇ ಸಹಾಯ ದೊರೆತರೂ ಯಾರೂ ಕುರ್ದ್‌ ಜನರನ್ನು ರಕ್ಷಿಸಲು ಸಾಧ್ಯವಿಲ್ಲ’ ಎಂದು ಬ್ರಿಟನ್‌ ಬಾಲಕ ಹೇಳುವ ದೃಶ್ಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.