ADVERTISEMENT

ಬ್ರೆಕ್ಸಿಟ್‌: ತಕ್ಷಣದ ಪ್ರಕ್ರಿಯೆಗೆ ಒತ್ತಾಯ

ಐರೋಪ್ಯ ಒಕ್ಕೂಟದ ಸಂಸತ್‌ ನಿರ್ಣಯ * ಬ್ರಿಟನ್ ನಿರ್ಗಮನದಿಂದ ಒಕ್ಕೂಟದ ಅಸ್ತಿತ್ವಕ್ಕೆ ಧಕ್ಕೆಯಿಲ್ಲ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 23:30 IST
Last Updated 28 ಜೂನ್ 2016, 23:30 IST
ಬೆಲ್ಜಿಯಂನ ಬ್ರಸಲ್ಸ್‌ನಲ್ಲಿ ಮಂಗಳವಾರ ನಡೆದ ಐರೋಪ್ಯ ಒಕ್ಕೂಟದ ಸಂಸತ್‌ ಅಧಿವೇಶನದಲ್ಲಿ ಒಕ್ಕೂಟದ ಆಯೋಗದ ಅಧ್ಯಕ್ಷ ಜೀನ್‌ ಕ್ಲಾಡ್‌ ಜಂಕರ್‌ ಅವರನ್ನು ಭೇಟಿಯಾದ ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಅವರು ಭಾವುಕರಾದರು.           -ರಾಯಿಟರ್‍ಸ್‌ ಚಿತ್ರ
ಬೆಲ್ಜಿಯಂನ ಬ್ರಸಲ್ಸ್‌ನಲ್ಲಿ ಮಂಗಳವಾರ ನಡೆದ ಐರೋಪ್ಯ ಒಕ್ಕೂಟದ ಸಂಸತ್‌ ಅಧಿವೇಶನದಲ್ಲಿ ಒಕ್ಕೂಟದ ಆಯೋಗದ ಅಧ್ಯಕ್ಷ ಜೀನ್‌ ಕ್ಲಾಡ್‌ ಜಂಕರ್‌ ಅವರನ್ನು ಭೇಟಿಯಾದ ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಅವರು ಭಾವುಕರಾದರು. -ರಾಯಿಟರ್‍ಸ್‌ ಚಿತ್ರ   

ಬ್ರಸಲ್ಸ್‌ /ಬರ್ಲಿನ್‌(ಎಎಫ್‌ಪಿ/ಪಿಟಿಐ): ಐರೋಪ್ಯ ಒಕ್ಕೂಟದಿಂದ ಹೊರ ಬರುವ ‘ಬ್ರೆಕ್ಸಿಟ್‌’ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸುವಂತೆ ಐರೋಪ್ಯ ಸಂಸತ್‌ ಮಂಗಳವಾರ ಬ್ರಿಟನ್‌ಗೆ ಒತ್ತಾಯಿಸಿದೆ. ಜನರು ವ್ಯಕ್ತಪಡಿಸಿರುವ ಇಚ್ಛೆಯನ್ನು ಸಂಪೂರ್ಣವಾಗಿ ಪಾಲಿಸಬೇಕು ಮತ್ತು ಗೌರವಿಸಬೇಕು.

ಕಲಂ 50ಅನ್ನು ಜಾರಿಗೆ ತರುವ ಪ್ರಕ್ರಿಯೆಗೆ ತತ್‌ಕ್ಷಣದಿಂದಲೇ ಚಾಲನೆ ನೀಡಬೇಕು ಎನ್ನುವ ನಿರ್ಣಯವನ್ನು ಐರೋಪ್ಯ ಸಂಸತ್‌ನ ತುರ್ತು ಅಧಿವೇಶನದಲ್ಲಿ ಸದಸ್ಯರು ಅಂಗೀಕರಿಸಿದ್ದಾರೆ. ನಿರ್ಣಯದ ಪರ 395 ಸದಸ್ಯರು ಹಾಗೂ 200 ಮಂದಿ ನಿರ್ಣಯದ ವಿರುದ್ಧ ಮತ ಹಾಕಿದರು.

71 ಸದಸ್ಯರು ಗೈರು ಹಾಜರಾಗಿದ್ದರು. ಒಕ್ಕೂಟದ ಲಿಸ್ಬನ್‌ ಒಪ್ಪಂದದ ಅನ್ವಯ, ಒಕ್ಕೂಟದಿಂದ ಹೊರಹೋಗುವ ಕಲಂ 50ಅನ್ನು  ಸಂಪೂರ್ಣ ಜಾರಿ ಮಾಡಲು ಎರಡು ವರ್ಷಗಳ ಕಾಲಾವಕಾಶವಿದೆ.

ಒಕ್ಕೂಟ ಶಕ್ತಿಶಾಲಿ: ಬ್ರೆಕ್ಸಿಟ್‌ ಬಳಿಕವೂ ಅಸ್ತಿತ್ವ ಕಾಪಾಡಿಕೊಳ್ಳುವಷ್ಟು ಐರೋಪ್ಯ ಒಕ್ಕೂಟ ಶಕ್ತಿಶಾಲಿಯಾಗಿದೆ ಎಂದಿರುವ ಜರ್ಮನಿಯ ಛಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಅವರು, ಭವಿಷ್ಯದಲ್ಲಿ ಬ್ರಿಟನ್‌ ಸಂಬಂಧಗಳನ್ನು ಬೆಳೆಸಲು ಒಕ್ಕೂಟದ ಕೆಲವು ದೇಶಗಳನ್ನು ಆಯ್ದುಕೊಳ್ಳುವಂತಹ ನೀತಿ ಅನುಸರಿಸಿದರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇಂಗ್ಲಿಷ್‌ ಭಾಷೆಯೂ ಹೊರಕ್ಕೆ?
ಲಂಡನ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಹೋಗುವುದರ ಜತೆ ಇಂಗ್ಲಿಷ್‌ ಭಾಷೆಯೂ ಒಕ್ಕೂಟದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಕ್ಕೂಟದ 28 ದೇಶಗಳ ಪೈಕಿ ಇಂಗ್ಲಿಷ್‌ಅನ್ನು ಪ್ರಾಥಮಿಕ ಭಾಷೆಯನ್ನಾಗಿ ಬ್ರಿಟನ್ ಮಾತ್ರ ನೋಂದಣಿ ಮಾಡಿಕೊಂಡಿತ್ತು. 

ಐರೋಪ್ಯ ಒಕ್ಕೂಟಕ್ಕೆ ಇಂಗ್ಲಿಷ್‌ ಸಂವಹನ ಭಾಷೆಯ ಪ್ರಮುಖ ಆಯ್ಕೆಯಾಗಿದೆ. ಆದರೆ ಬ್ರಿಟನ್‌ ಒಕ್ಕೂಟದಿಂದ ಹೊರಹೋಗಲು ನಿರ್ಧರಿಸಿರುವುದರಿಂದ ಭಾಷೆಯ ಬಳಕೆ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಕ್ಕೂಟದಲ್ಲಿ ಉಳಿದಿರುವ 27 ದೇಶಗಳು ಒಮ್ಮತಾಭಿಪ್ರಾಯದಿಂದ ಅಧಿಕೃತ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

‘ಒಕ್ಕೂಟದ ಪ್ರತಿ ದೇಶವೂ ಒಂದು ಅಧಿಕೃತ ಭಾಷೆಯನ್ನು ಸೂಚಿಸುವ ಹಕ್ಕು ಹೊಂದಿವೆ’ ಎಂದು ಐರೋಪ್ಯ ಸಂಸತ್‌ನ  ಸಾಂವಿಧಾನಿಕ ವ್ಯವಹಾರಗಳ ಸಮಿತಿಯ ಮುಖ್ಯಸ್ಥೆ ಪೋಲೆಂಡ್‌ನ ಡಾನುಟ ಹಬ್ನರ್‌ ತಿಳಿಸಿದ್ದಾರೆ. ‘ಐರ್ಲೆಂಡ್‌  ಮತ್ತು ಮಾಲ್ಟಾಗಳಲ್ಲಿ ಇಂಗ್ಲಿಷ್‌ ಸಾಮಾನ್ಯ ಭಾಷೆಯಾಗಿ ಬಳಕೆಯಲ್ಲಿದ್ದರೂ ಅವು, ‘ಗೇಲಿಕ್‌’ ‘ಮಾಲ್ಟಿಸ್‌’ ಭಾಷೆಯನ್ನು ಸೂಚಿಸಿವೆ.

ಇಂಗ್ಲಿಷ್‌ಅನ್ನು ಸೂಚಿಸುವ ದೇಶ ಬ್ರಿಟನ್ ಮಾತ್ರ’ ಎಂದು ಅವರು ಹೇಳಿದ್ದಾರೆ. ಒಕ್ಕೂಟವು ಒಟ್ಟು 24 ಅಧಿಕೃತ ಭಾಷೆಯನ್ನು ಹೊಂದಿದ್ದರೂ, ದೈನಂದಿನ ವ್ಯವಹಾರಗಳಲ್ಲಿ ಇಂಗ್ಲಿಷ್‌, ಫ್ರೆಂಚ್‌ ಮತ್ತು ಜರ್ಮನ್‌ ಭಾಷೆಗಳನ್ನು ಮಾತ್ರ ಬಳಸಲಾಗುತ್ತಿದೆ.

** *** **
ಐರೋಪ್ಯ ಒಕ್ಕೂಟದಿಂದ ಹೊರಹೋಗಲು ಬಯಸುವವರು ಎಲ್ಲಾ ನಂಟನ್ನೂ ತೊರೆಯಬೇಕಿಲ್ಲ. ಅವರು ಕೆಲವು ಸವಲತ್ತುಗಳನ್ನು ಕಳೆದುಕೊಳ್ಳುವುದಿಲ್ಲ.
-ಏಂಜೆಲಾ ಮರ್ಕೆಲ್,
ಜರ್ಮನ್ ಛಾನ್ಸೆಲರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT