ADVERTISEMENT

ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ: ನಿಲುವು ಬದಲಿಸಲಾಗದು ಎಂದ ಚೀನಾ

ಪಿಟಿಐ
Published 22 ಮೇ 2017, 10:29 IST
Last Updated 22 ಮೇ 2017, 10:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಭಾರತವೂ ಸೇರಿ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳನ್ನು ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಸೇರಿಸುವ ವಿಚಾರದಲ್ಲಿ ನಿಲುವು ಬದಲಿಸುವುದಿಲ್ಲ ಎಂದು ಚೀನಾ ಹೇಳಿದೆ.

ಭಾರತವನ್ನು ಗುಂಪಿಗೆ ಸೇರಿಸಲು ಚೀನಾದ ಸಮ್ಮತಿಯೂ ಅಗತ್ಯವಾಗಿದ್ದು, ಹಿಂದಿನಿಂದಲೂ ಅದು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. 48 ಸದಸ್ಯ ರಾಷ್ಟ್ರಗಳ ಎನ್‌ಎಸ್‌ಜಿ ಸಭೆ ಮುಂದಿನ ತಿಂಗಳು ಸ್ವಿಜರ್ಲೆಂಡ್‌ನ ರಾಜಧಾನಿ ಬರ್ನ್‌ನಲ್ಲಿ ನಡೆಯಲಿರುವುದರಿಂದ ಚೀನಾದ ಈ ಹೇಳಿಕೆ ಮಹತ್ವ ಪಡೆದಿದೆ.

‘ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತ ಮೂಡಿಸುವುದು ಮತ್ತು ಪಾರದರ್ಶಕ ವ್ಯವಹಾರಕ್ಕೆ ಒತ್ತು ನೀಡುವ ಬಗ್ಗೆ 2016ರಲ್ಲಿ ಸೋಲ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಕ್ಕೆ ನಮ್ಮ ಬೆಂಬಲವಿದೆ’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಭಾರತವು ಮನವಿ ಸಲ್ಲಿಸಿದ ಬೆನ್ನಲ್ಲೇ ಚೀನಾದ ಬೆಂಬಲದೊಂದಿಗೆ ಪಾಕಿಸ್ತಾನವೂ ಸದಸ್ಯತ್ವಕ್ಕೆ ಮನವಿ ಸಲ್ಲಿಸಿತ್ತು. ಭಾರತಕ್ಕೆ ಅಮೆರಿಕ ಬಲವಾದ ಬೆಂಬಲ ನೀಡಿದೆ. ಆದರೆ, ಹೊಸ ರಾಷ್ಟ್ರಗಳಿಗೆ ಸದಸ್ಯತ್ವ ನೀಡಬೇಕಾದರೆ ಅವುಗಳು ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕಲೇಬೇಕು ಎಂಬುದು ಚೀನಾದ ವಾದವಾಗಿದೆ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ. ಒಪ್ಪಂದದಲ್ಲಿರುವ ತಾರತಮ್ಯ ನಿವಾರಿಸಿದರೆ ಸಹಿ ಹಾಕುವುದಾಗಿ ಭಾರತ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.