ADVERTISEMENT

ಭಾರತದ ಮೇಲೆ ದಾಳಿ ಸಿದ್ಧತೆ

ದೇಶದಲ್ಲಿ ಅಸ್ಥಿರತೆ, ಪ್ರಾಬಲ್ಯ ಹೆಚ್ಚಳ ಐ.ಎಸ್‌ ಉಗ್ರರ ಉದ್ದೇಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ವಾಷಿಂಗ್ಟನ್‌ (ಪಿಟಿಐ): ಭಾರತದ ಮೇಲೆ ದಾಳಿ ನಡೆಸಲು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಸಿದ್ಧತೆ ನಡೆಸುತ್ತಿದ್ದಾರೆ.
ಅಮೆರಿಕದ ವಿರುದ್ಧ ದಾಳಿಗೆ ಮುಸ್ಲಿಮರನ್ನು ಪ್ರಚೋದಿಸುವುದು ಈ ದಾಳಿಯ ಉದ್ದೇಶವಾಗಿದೆ ಎನ್ನಲಾಗಿದೆ. ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದ ಲ್ಲಿನ ತಾಲಿಬಾನ್‌ ಉಗ್ರರು ಭಾರತದ ದಾಳಿಗೆ ಒಂದುಗೂಡಬೇಕು ಎಂದು ಐಎಸ್‌ ಆಂತರಿಕ ನೇಮಕಾತಿ ದಾಖಲೆಗಳು ಬಹಿರಂಗಪಡಿಸಿವೆ.

ಅಮೆರಿಕದ ಪತ್ರಿಕೆಯಲ್ಲಿ ಈ ಬಗ್ಗೆ ತನಿಖಾ ವರದಿ ಪ್ರಕಟವಾಗಿದೆ. ತಾಲಿಬಾನ್‌ ಉಗ್ರರ ಜತೆ ಸಂಪರ್ಕ ಹೊಂದಿರುವ ಪಾಕಿಸ್ತಾನಿ ಪ್ರಜೆಯೊಬ್ಬನಿಂದ ವಶಪಡಿಸಿಕೊಂಡ 32 ಪುಟಗಳನ್ನೊಳಗೊಂಡ ಉರ್ದು ಭಾಷೆಯಲ್ಲಿನ ದಾಖಲೆಗಳಲ್ಲಿ ಭಾರತದ ದಾಳಿ ಬಗ್ಗೆ ವಿವರಗಳು ಇವೆ ಎಂಬುದನ್ನು ಮಾಧ್ಯಮ ಸಂಸ್ಥೆ ಉಲ್ಲೇಖ ಮಾಡಿದೆ.

ಈ ದಾಖಲೆಗಳಲ್ಲಿ ‘ಭಾರತದಲ್ಲಿ ದಾಳಿ ನಡೆಸಲು ಐಎಸ್‌ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಮೂಲಕ ಅಮೆರಿಕದೊಂದಿಗೆ ಯುದ್ಧಕ್ಕೆ ತಯಾರಾಗಲು ಉತ್ತೇಜಿಸುತ್ತಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ. ‘ಅಮೆರಿಕ ತನ್ನ ಮೈತ್ರಿ ರಾಷ್ಟ್ರಗಳ ಜತೆ ಒಗ್ಗೂಡಿ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಎಲ್ಲಾ ಮುಸ್ಲಿಂ ಜನರು ಒಂದಾಗಿ, ಕಟ್ಟಕಡೆಯ ಯುದ್ಧದಲ್ಲಿ ಜಯ ಸಾಧಿಸಬೇಕು’ ಎಂದು  ಹೇಳಿದೆ.

ಭಾರತದ ಮೇಲೆ ದಾಳಿ ನಡೆಸುವ ಮೂಲಕ ಐಎಸ್ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಹಾಗೂ ಈ ಪ್ರಾಂತ್ಯದಲ್ಲಿ ಅಸ್ಥಿರತೆ ಉಂಟುಮಾಡುವುದು ಅವರ ಉದ್ದೇಶವಾಗಿದೆ. ಈ ದಾಳಿಯನ್ನು ದಕ್ಷಿಣ ಏಷ್ಯಾದ ಜಿಹಾದಿಗಳು ಅತ್ಯಂತ ಪವಿತ್ರ ಹೋರಾಟವೆಂದು ಪರಿಗಣಿಸುವರು ಎಂದು ಸಿಐಎನ ಮಾಜಿ ಅಧಿಕಾರಿ ಬ್ರೂಸ್‌ ರಿಡೆಲ್‌ ಹೇಳಿದ್ದಾರೆ.

ಭಾಷಾಂತರ:  ಉರ್ದು ಭಾಷೆಯಲ್ಲಿನ ದಾಖಲೆಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದು, ಅದನ್ನು ಗುಪ್ತಚರ ವಿಭಾಗದ ಹಾಲಿ ಹಾಗೂ ನಿವೃತ್ತ ಅಧಿಕಾರಿಗಳು ಹಲವು ಬಾರಿ ಪರಿಶೀಲಿಸಿದ್ದಾರೆ.

ಇದು ಅಸಲಿ ಎಂಬುದನ್ನು ಖಚಿತಪಡಿಸಿಕೊಂಡಿರುವ ಅಮೆರಿಕದ ಗುಪ್ತಚರ ಅಧಿಕಾರಿಗಳು, ಅದರಲ್ಲಿ ನಾಯಕನನ್ನು ಬಣ್ಣಿಸಲು ಬಳಸಿರುವ ಪದಗಳು, ಬರವಣಿಗೆ ಶೈಲಿ, ಧಾರ್ಮಿಕ ಪದಗಳು ಐಎಸ್‌ನ ಇತರ ದಾಖಲೆಗಳೊಂದಿಗೆ ತಾಳೆ ಆಗುತ್ತವೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.