ADVERTISEMENT

ಭಾರತದ ಸಾಕ್ಷಿದಾರರ ಕರೆತನ್ನಿ: ಪಾಕ್‌

ಪಿಟಿಐ
Published 24 ಸೆಪ್ಟೆಂಬರ್ 2017, 19:34 IST
Last Updated 24 ಸೆಪ್ಟೆಂಬರ್ 2017, 19:34 IST

ಲಾಹೋರ್‌: 2008ರಲ್ಲಿ ನಡೆದ ಮುಂಬೈ ದಾಳಿಯ (26/11)  ಏಳು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಭಾರತದ 24 ಸಾಕ್ಷಿದಾರರ ಹೇಳಿಕೆ ದಾಖಲಿಸಲು ಪಾಕಿಸ್ತಾನದ ಕೋರ್ಟ್‌ ಬಯಸಿದೆ. ಈ ಸಂಬಂಧ ಅವರನ್ನು ಕರೆತರಲು ವ್ಯಕ್ತಿಯೊಬ್ಬರನ್ನು ನೇಮಕ ಮಾಡುವಂತೆ ಫೆಡರಲ್‌ ತನಿಖಾ ಸಂಸ್ಥೆಗೆ ಆದೇಶಿಸಿದೆ.

ಜಾಕಿರ್‌ ರೆಹಮಾನ್‌ ಲಖ್ವಿ, ಅಬ್ದುಲ್‌ ವಾಜಿದ್‌, ಮಜಹರ್‌ ಇಕ್ಬಾಲ್‌, ಹಮದ್‌ ಅಮಿನ್‌ ಸಾದಿಖ್, ಶಾಹಿದ್‌ ಜಮೀಲ್‌ ರಿಯಾಜ್‌, ಜಮಿಲ್‌ ಅಹಮದ್‌ ಮತ್ತು ಯುನಿಸ್‌ ಅಂಜುಮ್‌ ಅವರ ವಿರುದ್ಧ ಕೊಲೆ, ಕೊಲೆಗೆ ಯತ್ನ ಹಾಗೂ ಕೊಲೆಗೆ ಯೋಜನೆ ರೂಪಿಸಿರುವ ಆರೋಪವಿದೆ.

‘ಸುಮಾರು ಏಳು ವರ್ಷಗಳಿಂದ ಈ ಆರೋಪಿಗಳ ತನಿಖೆ ನಡೆಯುತ್ತಿದ್ದು, ಅದನ್ನು ಅಂತಿಮಗೊಳಿಸಲು ಈ ಸಾಕ್ಷಿದಾರರ ಹೇಳಿಕೆಯ ಅಗತ್ಯವಿದೆ’ ಎಂದು ಪ್ರಾಸಿಕ್ಯೂಷನ್‌ ಹೇಳಿರುವ ಕಾರಣ ಕೋರ್ಟ್‌ ಈ ಆದೇಶ ಹೊರಡಿಸಿದೆ. ಇನ್ನೊಂದೆಡೆ ಈಗಾಗಲೇ ತಾವು ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಿದ್ದು ಪ್ರಕರಣವನ್ನು ಶೀಘ್ರದಲ್ಲಿ ಮುಗಿಸುವಂತೆ ಭಾರತ ಪಾಕಿಸ್ತಾನವನ್ನು ಮೇಲಿಂದ ಮೇಲೆ ಕೋರುತ್ತಾ ಬಂದಿದೆ. ಭಯೋತ್ಪಾದನಾ ನಿಗ್ರಹ ಕಾನೂನಿನ ಅಡಿ ಸದ್ಯ ಲಾಹೋರ್‌ನಲ್ಲಿ ಗೃಹ ಬಂಧನದಲ್ಲಿ ಇರುವ ಜಮ್ಮತ್‌–ಉದ್‌–ದವಾ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ವಿಚಾರಣೆಗೆ ಒಳಪಡಿಸುವಂತೆ ಭಾರತವು ಕೋರಿದೆ.

‘ಒಂದು ವೇಳೆ ಸಾಕ್ಷಿದಾರರು ಬರದಿದ್ದರೆ ಅವರ ಅನುಪಸ್ಥಿತಿಯಲ್ಲಿಯೇ ತೀರ್ಪು ಹೊರಡಿಸುವುದು ಅನಿವಾರ್ಯವಾಗುತ್ತದೆ’ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT