ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿ ನಡೆದ ಮಧ್ಯಾಂತರ ಚುನಾವಣೆಗಳಲ್ಲಿ ಡೆಮಾಕ್ರೆಟಿಕ್ ಪಕ್ಷದ ನೀರಜ್ ಆಂಟನಿ ಸೇರಿದಂತೆ ಭಾರತ ಮೂಲದ ಹಲವರು ಕಾಂಗ್ರೆಸ್ಗೆ (ಸಂಸತ್) ಆಯ್ಕೆಯಾಗಿದ್ದಾರೆ.
ಓಹಿಯೋ ಕ್ಷೇತ್ರದಿಂದ ಜನಪ್ರತಿನಿಧಿ ಸಭೆಗೆ (ಕಾಂಗ್ರೆಸ್ನ ಕೆಳಮನೆ) ಆಯ್ಕೆಯಾಗಿರುವ ನೀರಜ್ ಆಂಟನಿ (23) ಅತಿ ಕಿರಿಯ ವಯಸ್ಸಿನ ಜನಪ್ರತಿನಿಧಿ.
ಹವಾಯಿ ಕ್ಷೇತ್ರದಿಂದ 33 ವರ್ಷದ ತುಳಸಿ ಗಾಬರ್ಡ್ ಅವರು ಮರುಆಯ್ಕೆಯಾಗಿದ್ದಾರೆ. ಅವರು ಕಾಂಗ್ರೆಸ್ಗೆ ಆಯ್ಕೆಯಾಗಿರುವ ಏಕೈಕ ಹಿಂದೂ ಎನ್ನಲಾಗಿದೆ. 2012ರಲ್ಲಿ ಮೊದಲ ಬಾರಿಗೆ ಜನಪ್ರತಿನಿಧಿ ಸಭೆಗೆ ತುಳಸಿ ಆಯ್ಕೆಯಾಗಿದ್ದರು.
ನಿಕ್ಕಿ ಹ್ಯಾಲಿ ಅವರು ಎರಡನೇ ಬಾರಿಗೆ ದಕ್ಷಿಣ ಕರೊಲಿನಾದ ಗವರ್ನರ್ ಆಗಿ ಮರು ಆಯ್ಕೆಯಾಗಿದ್ದಾರೆ.
ಕ್ಯಾಲಿಪೋರ್ನಿಯಾದ ಅಟಾರ್ನಿ ಜನರಲ್ ಆಗಿ ಕಮಲಾ ಹ್ಯಾರಿಸ್ ಪುನರಾಯ್ಕೆಯಾಗಿದ್ದಾರೆ. 50 ವರ್ಷದ ಹ್ಯಾರಿಸ್ ಅವರ ಅಧಿಕಾರಾವಧಿ ನಾಲ್ಕು ವರ್ಷ.
ನಿವೃತ್ತ ವೈದ್ಯಾಧಿಕಾರಿ ಪ್ರಸಾದ್ ಶ್ರೀನಿವಾಸನ್ (ರಿಪಬ್ಲಿಕನ್ ಪಕ್ಷ) ಅವಿರೋಧವಾಗಿ, ಶ್ಯಾಮ್ ಸಿಂಗ್ (ಮೆರ್ರಿಲೆಂಡ್ ಕ್ಷೇತ್ರ) ಡೆಮಾಕ್ರೆಟಿಕ್ ಪಕ್ಷದಿಂದ ಪುನರಾಯ್ಕೆಯಾಗಿದ್ದಾರೆ. ಇದಲ್ಲದೆ ಭಾರತೀಯರಾದ ಅರುಣಾ ಮಿಲ್ಲರ್, ಪ್ರಮೀಳಾ ಜೈಪಾಲ್ ಸೇರಿದಂತೆ ಹಲವರು ಸೆನೆಟ್ಗೆ ಪುನರಾಯ್ಕೆಯಾಗಿದ್ದಾರೆ.
ರಿಪಬ್ಲಿಕನ್ ಪಕ್ಷಕ್ಕೆ ಬಹುಮತ
ಈ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷ ಮೇಲುಗೈ ಸಾಧಿಸಿದ್ದು, ಸೆನೆಟ್ನಲ್ಲಿ (ಮೇಲ್ಮನೆ) ಬಹುಮತ ಪಡೆದುಕೊಂಡಿದೆ. ಜನಪ್ರತಿನಿಧಿ ಸಭೆಯಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡಿದೆ. ಇದರಿಂದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಮತ್ತವರ ಡೆಮಾಕ್ರೆಟಿಕ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ಚುನಾವಣೆಯಲ್ಲಿ 7 ಸ್ಥಾನಗಳನ್ನು ಡೆಮಾಕ್ರೆಟಿಕ್ ಪಕ್ಷದಿಂದ ಕಿತ್ತುಕೊಂಡಿರುವ ರಿಪಬ್ಲಿಕ್ ಪಕ್ಷ, ಸೆನೆಟ್ನಲ್ಲಿ 8 ವರ್ಷಗಳ ಬಳಿಕ ನಿರ್ಣಾಯಕ ಪಾತ್ರ ವಹಿಸುವ ಸ್ಥಿತಿ ತಲುಪಿದೆ. ಜನಪ್ರತಿನಿಧಿ ಸಭೆಯ ಎಲ್ಲ 435 ಸ್ಥಾನಗಳಿಗೆ, ಸೆನೆಟ್ನ 100 ಸ್ಥಾನಗಳ ಪೈಕಿ 36ಕ್ಕೆ 50 ರಾಜ್ಯಗಳ ಪೈಕಿ 36 ರಾಜ್ಯ ಮತ್ತು ಪ್ರಾದೇಶಿಕ ಗವರ್ನರ್ ಹುದ್ದೆಗಳಿಗೆ ಚುನಾವಣೆ ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.