ADVERTISEMENT

ಭೀಕರ ದೋಣಿ ದುರಂತ: 300 ಜನ ನಾಪತ್ತೆ

ದಕ್ಷಿಣ ಕೊರಿಯಾ ಸಮುದ್ರದಲ್ಲಿ ನಡೆದ ದುರ್ಘಟನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಸೋಲ್‌ (ಎಎಫ್‌ಪಿ): ರಜಾದಿನದ  ಪ್ರವಾಸಕ್ಕಾಗಿ ಪ್ರೌಢ­ಶಾಲಾ ಮಕ್ಕಳನ್ನು ದ್ವೀಪಕ್ಕೆ ಕರೆದೊ­ಯ್ಯು­ತ್ತಿದ್ದ ಬಹು­ಮಹಡಿ ದೋಣಿ­ಯೊಂದು ದಕ್ಷಿಣ ಕೊರಿಯಾ ಸಮು­ದ್ರದಲ್ಲಿ ಮಗುಚಿಬಿದ್ದು 300 ಜನರು ನಾಪತ್ತೆಯಾಗಿರುವ ಘಟನೆ ಬುಧ­ವಾರ ಸಂಭವಿಸಿದೆ.

ಬಿಯಾಂಗ್‌ಪಂಗ್‌ ದ್ವೀಪದಿಂದ ದಕ್ಷಿ­ಣಕ್ಕೆ 20 ಕಿ.ಮೀ. ದೂರದ ಸಮುದ್ರ­ದಲ್ಲಿ ಸಂಭ­ವಿ­ಸಿದ ಈ ಘಟನೆ­ಯಲ್ಲಿ ಒಬ್ಬ ವಿದ್ಯಾರ್ಥಿ ಮತ್ತು ದೋಣಿಯ ಮಹಿಳಾ ಸಿಬ್ಬಂದಿ ಸೇರಿ­ದಂತೆ ಕನಿಷ್ಠ ನಾಲ್ಕು ಜನ ಮೃತ­ಪಟ್ಟು 55 ಜನರು ಗಾಯ­ಗೊಂಡಿ­ದ್ದಾರೆ ಎಂದು ಮೂಲ­ಗಳು ತಿಳಿಸಿವೆ.

87 ಹಡಗುಗಳು ಮತ್ತು 18 ವಿಮಾ­ನ­ಗಳು ರಕ್ಷಣಾ ಕಾರ್ಯಾ­ಚ­ರ­ಣೆ­ಯಲ್ಲಿ ತೊಡಗಿ­ಕೊಂಡಿದ್ದು, ಇದು­­ವರೆಗೆ 164 ಜನರನ್ನು ರಕ್ಷಿ­ಸ­­ಲಾ­ಗಿದೆ. 160 ಕರಾವಳಿ ರಕ್ಷಣಾ ಸಿಬ್ಬಂದಿ ಮತ್ತು ಈಜು­ಗಾರರು ದೋಣಿಯ ಭಗ್ನಾವ­ಶೇಷದ ಅಡಿಯಲ್ಲಿ  ಬದುಕಿರು­ವವ­ರಿ­ಗಾಗಿ ಶೋಧ­ಕಾರ್ಯ ನಡೆ­ಸು­ತ್ತಿ­ದ್ದಾರೆ.

‘ದೋಣಿಯಲ್ಲಿ 30 ಸಿಬ್ಬಂದಿ, 325 ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು 15 ಶಿಕ್ಷಕರು ಮತ್ತು 89 ಸಾಮಾನ್ಯ ಪ್ರಯಾಣಿಕರು ಇದ್ದರು. ಇವರಲ್ಲಿ 300 ಜನರು ಇನ್ನೂ ಪತ್ತೆಯಾಗಿಲ್ಲ’ ಎಂದು ಭದ್ರತೆ, ಸಾರ್ವಜನಿಕ ಆಡಳಿತ ಇಲಾಖೆಯ ಉಪಮಂತ್ರಿ ಲೀ ಗ್ಯೋಂಗೊಗ್‌ ತಿಳಿಸಿದ್ದಾರೆ.

ಮೃತರ ಸಂಖ್ಯೆ ಗಣನೀಯವಾಗಿ ಹೆಚ್ಚುವ ಆತಂಕ ಎದುರಾಗಿದ್ದು,  ಕಾಣೆ­ಯಾ­ದವರಲ್ಲಿ ಬಹುಪಾಲು ಜನರು ದೋಣಿ­­ಯಲ್ಲಿ ಸಿಲುಕಿಕೊಂಡಿ­ರ­ಬ­ಹುದು ಅಥವಾ ಸಮುದ್ರದಲ್ಲಿ ತೇಲು­ತ್ತಿ­ರು­ಬಹುದು ಎಂದು ಹೇಳಲಾಗಿದೆ.

‘ದೋಣಿ ಜೋರಾಗಿ ಓಲಾಡತೊ­ಡಗಿ­ದಾಗ ನಾವು ಒಬ್ಬರ ಮೇಲೊಬ್ಬರು ಮುಗ್ಗ­ರಿಸಿ ಬಿದ್ದೆವು. ಕೆಲವು ಜನರಿಗೆ ಗಾಯ­ವಾಗಿ ರಕ್ತ ಸೋರುತ್ತಿತ್ತು. ನಾನು ಮತ್ತು ಉಳಿದ ಕೆಲವು ವಿದ್ಯಾರ್ಥಿಗಳು ರಕ್ಷಣಾ ಕವಚ ತೊಟ್ಟು ಸಮುದ್ರಕ್ಕೆ ಜಿಗಿ­ದೆವು. ಸಮುದ್ರ ನೀರು ತುಂಬ ತಣ್ಣಗಿತ್ತು. ಆಗ ನಾನು ಹೇಗಾದರೂ ಬದುಕಲೇಬೇಕು ಎಂದು  ಯೋಚಿ­ಸುತ್ತಿದ್ದೆ’ ಎಂದು ನತದೃಷ್ಟ ದೋಣಿಯಲ್ಲಿದ್ದ  ವಿದ್ಯಾರ್ಥಿ ಲಿಮ್‌ ಹ್ಯುಂಗ್‌ಮಿನ್‌ ಅಪ­ಘಾತದ ಭೀಕರತೆಯನ್ನು ನೆನಪಿಸಿಕೊಂಡಿದ್ದಾನೆ.1993ರಲ್ಲಿ 292 ಜನರನ್ನು ಬಲಿ ತೆಗೆ­­ದು­­ಕೊಂಡ ದೋಣಿ ಅವಘಡದ ನಂತರ ದಕ್ಷಿಣ ಕೊರಿಯಾದಲ್ಲಿ ಸಂಭ­ವಿ­ಸಿದ  ಅತಿದೊಡ್ಡ ದೋಣಿ ಅಪಘಾತ ಇದಾಗಿದೆ.

ದೋಣಿ ಮುಳುಗಿದ್ದು ಹೇಗೆ?
ಸಮುದ್ರದಲ್ಲಿ ಮೂರು ಗಂಟೆ ಪ್ರಯಾ­ಣಿಸಿದ ನಂತರ ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ದೋಣಿಯಿಂದ ಅಪಾ­­ಯದ ಸಂದೇಶ ಬಂತು. ಆ ಹೊತ್ತಿಗಾಗಲೇ ಬೃಹತ್‌ ದೋಣಿ ಒಂದು ಕಡೆಗೆ ವಾಲತೊ­ಡ­ಗಿತ್ತು. ರಕ್ಷಣಾ ಸಿಬ್ಬಂದಿ ದೋಣಿಯನ್ನು ಸುತ್ತು­ವರಿದು ಪ್ರಯಾಣಿ­ಕರನ್ನು ರಕ್ಷಿಸು­ತ್ತಿ­­ದ್ದಾಗಲೇ ಅದು ನಿಧಾನಕ್ಕೆ ತಲೆಕೆಳಗಾಯಿತು. ಈ ದುರಂತಕ್ಕೆ ಖಚಿತ ಕಾರಣ ಇನ್ನೂ ತಿಳಿದು­ಬಂದಿಲ್ಲ. ಸದ್ಯಕ್ಕೆ ನಾವು ಪರಿ­­­ಹಾರ ಕಾರ್ಯಾ­ಚರಣೆಯತ್ತ ಗಮನ ನೀಡಿದ್ದೇವೆ ಎಂದು ದಕ್ಷಿಣ ಕೊರಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ನೀರಿನ ಉಷ್ಣಾಂಶ ಕೇವಲ 12 ಡಿಗ್ರಿ ಸೆಲ್ಸಿಯಸ್‌­ಗಳ­ಷ್ಟಿದೆ. ಸಮುದ್ರ ಮೂವ­ತ್ತೇಳು ಮೀಟ­ರ್‌­ಗಳಷ್ಟು ಆಳ­ವಿದೆ. ಸಮುದ್ರ ತಳ­ದಲ್ಲಿನ ಮಣ್ಣು ಹಾಗೂ ಪ್ರತಿಕೂಲ ಹವಾ­ಮಾನ­ದಿಂದಾಗಿ ಶೋಧಕಾರ್ಯಕ್ಕೆ ಅಡಚಣೆ­ಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.